
ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಸುಮಾರು 3 ರೂಪಾಯಿ ಹೆಚ್ಚಳ ಕಂಡುಬಂದಿದೆ. ಇದರ ಬೆನ್ನಲ್ಲೇ ಖಾಸಗಿ ಬಸ್ ಮಾಲೀಕರು ಸಭೆ ನಡೆಸಿ ಟಿಕೆಟ್ ದರವನ್ನು ಏಕಾಏಕಿ ಹೆಚ್ಚಿಸಲು ನಿರ್ಧರಿಸಿದ್ದು, ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ. ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಬೀಳುತ್ತಿದೆ ಎಂದು ಹೇಳಲಾಗುತ್ತಿದ್ದು, ಪೆಟ್ರೋಲ್-ಡೀಸೆಲ್ ಮಾತ್ರವಲ್ಲದೇ ಚಿನ್ನ-ಬೆಳ್ಳಿ ಹಾಗೂ ಅಕ್ಕಿ ಸೇರಿದಂತೆ ಅನೇಕ ಅಗತ್ಯ ವಸ್ತುಗಳ ದರವೂ ಹೆಚ್ಚಾಗುತ್ತಿರುವ ನಡುವೆಯೇ ಈಗ ಬಸ್ ಟಿಕೆಟ್ ದರವೂ ಹೆಚ್ಚಳವಾಗಿದೆ. ನಗರದಿಂದ ದೂರದ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಹೆಚ್ಚಾಗಿ ಖಾಸಗಿ ಬಸ್ಗಳನ್ನೇ ಅವಲಂಬಿಸುತ್ತಿದ್ದು, ಅವರಿಗೆ ಇದು ದೊಡ್ಡ ಹೊಡೆತವಾಗಿದೆ. ಖಾಸಗಿ ಬಸ್ ಮಾಲೀಕರು ಶೇಕಡಾ 20 ರಿಂದ 30 ರಷ್ಟು ದರ ಹೆಚ್ಚಳಕ್ಕೆ ಮುಂದಾಗಿದ್ದು, ನಾನ್ ಎಸಿ ಸ್ಲೀಪರ್ ಬಸ್ಗಳ ದರಗಳಲ್ಲಿ ಬೆಂಗಳೂರು–ಬೆಳಗಾವಿ ರೂ.1000 ರಿಂದ 1200, ಬೆಂಗಳೂರು–ಮಂಗಳೂರು ರೂ.900 ರಿಂದ 1150, ಬೆಂಗಳೂರು–ಮಡಿಕೇರಿ ರೂ.700 ರಿಂದ 900, ಬೆಂಗಳೂರು–ಹುಬ್ಬಳ್ಳಿ ರೂ.900 ರಿಂದ 1050, ಬೆಂಗಳೂರು–ಕಲಬುರ್ಗಿ ರೂ.1200 ರಿಂದ 1400 ಹಾಗೂ ಬೆಂಗಳೂರು–ಬಳ್ಳಾರಿ ರೂ.800 ರಿಂದ 950ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಮಾತನಾಡಿ, ಡೀಸೆಲ್ ದರ ಏರಿಕೆಯ ಹಿನ್ನೆಲೆಯಲ್ಲಿ ದರ ಹೆಚ್ಚಳ ಅನಿವಾರ್ಯವಾಗಿದ್ದು, ಈಗಾಗಲೇ ಬುಕಿಂಗ್ ಮಾಡಿಕೊಂಡವರಿಗೆ ಹಳೆಯ ದರವೇ ಅನ್ವಯವಾಗಲಿದೆ ಆದರೆ ಹೊಸ ಬುಕ್ಕಿಂಗ್ಗಳಿಗೆ ಇಂದಿನಿಂದಲೇ ಹೆಚ್ಚಿದ ದರ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.




