
ಮೈಸೂರು: ಎಸ್ಎಸ್ಎಲ್ಸಿ ಬಳಿಕ ಮುಂದೇನು ಎಂದು ಯೋಚಿಸುತ್ತಿರುವ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ ದೊರೆತಿದ್ದು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ 2026-27ನೇ ಸಾಲಿನ ಪೂರ್ಣಾವಧಿ ಡಿಪ್ಲೊಮಾ ಪ್ರವೇಶಾತಿ ಪ್ರಕ್ರಿಯೆಯನ್ನು ಅಧಿಕೃತವಾಗಿ ಆರಂಭಿಸಿದೆ. ಸಾಂಪ್ರದಾಯಿಕ ಕೋರ್ಸ್ಗಳ ಜೊತೆಗೆ ಇಂದಿನ ಟ್ರೆಂಡ್ಗೆ ತಕ್ಕಂತೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ (AI & ML) ಸೇರಿದಂತೆ ಅತ್ಯಾಧುನಿಕ ವಿಷಯಗಳನ್ನು ಕಲಿಯುವ ಅವಕಾಶ ಕಲ್ಪಿಸಲಾಗಿದೆ. ಇಂಜಿನಿಯರಿಂಗ್ ವಿಭಾಗದಲ್ಲಿ ಆಟೋಮೊಬೈಲ್, ಸಿವಿಲ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಹಾಗೂ AI & ML ಕೋರ್ಸ್ಗಳು ಲಭ್ಯವಿದ್ದು, ಇಂಜಿನಿಯರಿಂಗ್ ಅಲ್ಲದ ವಿಭಾಗದಲ್ಲಿ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್ (ಕನ್ನಡ/ಇಂಗ್ಲಿಷ್) ಕಲಿಯುವ ಅವಕಾಶವೂ ಇದೆ. ಅಭ್ಯರ್ಥಿಗಳು ಇಲಾಖೆಯ ವೆಬ್ಸೈಟ್ನಿಂದ ಅರ್ಜಿ ಡೌನ್ಲೋಡ್ ಮಾಡಿಕೊಂಡು, ಅದನ್ನು ಭರ್ತಿ ಮಾಡಿ ತಮ್ಮ ಆದ್ಯತಾ ಪಟ್ಟಿಯೊಂದಿಗೆ ಹತ್ತಿರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಿಗೆ ಸಲ್ಲಿಸಬೇಕು, ಮೆರಿಟ್ ಮತ್ತು ರೋಸ್ಟರ್ ಆಧಾರದ ಮೇಲೆ ಆನ್ಲೈನ್ ಮೂಲಕವೇ ಸೀಟು ಹಂಚಿಕೆ ನಡೆಯಲಿದೆ. ಅರ್ಜಿ ಸಲ್ಲಿಸಲು ಮೇ 16ರ ಸಂಜೆ 5 ಗಂಟೆಯವರೆಗೆ ಮಾತ್ರ ಅವಕಾಶವಿದ್ದು, ಆಫ್ಲೈನ್ ಪ್ರವೇಶ ಬಯಸುವವರು ನೇರವಾಗಿ ಆಯಾ ಸಂಸ್ಥೆಗಳನ್ನು ಸಂಪರ್ಕಿಸಬಹುದು. ಭವಿಷ್ಯದ ಇಂಜಿನಿಯರ್ ಆಗುವ ಕನಸನ್ನು ಸಾಕಾರಗೊಳಿಸಲು ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಇಲಾಖೆ ಮನವಿ ಮಾಡಿದೆ.







