
ಕೊಟ್ಟಿಗೆಹಾರ : ಬಣಕಲ್ ಗ್ರಾಮದ ಶ್ರೀಕಲ್ಲನಾಥೇಶ್ವರ ಸ್ವಾಮಿಯ ದಿವ್ಯ ರಥೋತ್ಸವ ಮತ್ತು ಜಾತ್ರೆ ಭಾರೀ ಸಂಭ್ರಮದಲ್ಲಿ ನಡೆಯಿತು. ಕೊಟ್ಟಿಗೆಹಾರ ಸಮೀಪದ ಬಣಕಲ್ ಗ್ರಾಮದಲ್ಲಿರುವ ದೇವಾಲಯದಲ್ಲಿ ಮಂಗಳವಾರ ಸಂಜೆ ರಥೋತ್ಸವ ಜರುಗಿದ್ದು, ಅದಕ್ಕೂ ಮುನ್ನ ಭಾನುವಾರ ಮಹಾಶಿವರಾತ್ರಿ ಪ್ರಯುಕ್ತ ರುದ್ರಾಭಿಷೇಕ, ನಿತ್ಯಪೂಜೆ, ಪುಣ್ಯವಾಚನ, ಗಣಪತಿ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಅಂಕುರ ಪೂಜೆ ಹಾಗೂ ಧ್ವಜಾರೋಹಣವೂ ಭಕ್ತಿಭಾವದಿಂದ ನಡೆಯಿತು. ಸೋಮವಾರ ಗಿರಿಜಾ ಕಲ್ಯಾಣ ಮತ್ತು ದೇವರ ರಥಾರೋಹಣ ಜರುಗಿದರೆ, ಮಂಗಳವಾರ ಭಕ್ತರು ಮಡಿಯಾಗಿ ಹಣ್ಣು, ಕಾಯಿ ಮತ್ತು ಧಾನ್ಯಗಳನ್ನು ಅರ್ಪಿಸಿದರು. ಸಂಜೆ ಜಾತ್ರೆಯಲ್ಲಿ ಕಿಕ್ಕಿರಿದ ಜನಸಮೂಹದ ನಡುವೆ ಭಕ್ತರು ದೇವಾಲಯದ ಹೆಬ್ಬಾಗಿಲುವರೆಗೆ ರಥ ಎಳೆದು ಸಂಭ್ರಮಿಸಿದರು. ಜಾತ್ರೆ ಮೈದಾನದಲ್ಲಿ ಮಕ್ಕಳು ತಿಂಡಿ-ತಿನಿಸು ಹಾಗೂ ಆಟಿಕೆಗಳನ್ನು ಖರೀದಿಸುತ್ತಿರುವ ದೃಶ್ಯ ಗಮನ ಸೆಳೆಯಿತು. ಬಣಕಲ್, ಕೂಡಹಳ್ಳಿ, ಕೊಟ್ಟಿಗೆಹಾರ, ತರುವೆ, ದೇವನಗೂಲ್, ಬಾಳೂರು, ಫಲ್ಗುಣಿ, ಚೇಗು, ಕೋಗಿಲೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ರಥೋತ್ಸವ ಮತ್ತು ಜಾತ್ರೋತ್ಸವದಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು. ತಾಲ್ಲೂಕಿನ ಗಣ್ಯರೂ ದರ್ಶನ ಪಡೆದು ಆಶೀರ್ವಾದ ಪಡೆದರು. ಬುಧವಾರ ಅವಭೃತ ಸ್ನಾನ (ನೀರೋಕಳಿ) ನೆರವೇರಿಸುವ ಮೂಲಕ ಸಂಭ್ರಮದ ಜಾತ್ರೆಗೆ ತೆರೆ ಎಳೆಯಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಬಿ.ಎಸ್. ದಿವ್ಯ ಪ್ರಸಾದ್, ಕಾರ್ಯದರ್ಶಿ ಬಿ.ಆರ್. ಅಭಿಲಾಷ್, ಗೌರವ ಕಾರ್ಯದರ್ಶಿ ಬಿ.ಸಿ. ಪ್ರವೀಣ್ ಹಾಗೂ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.




