
ಚಿಕ್ಕಮಗಳೂರು: ನಗರದಲ್ಲಿ ಹಿಂದೂ ಮನೆಗಳ ಮೇಲೆ ಅನ್ಯಕೋಮಿನ ಕೆಲ ಯುವಕರು ಕಲ್ಲು ತೂರಾಟ ನಡೆಸಿದರೆಂಬ ಆರೋಪದ ಹಿನ್ನೆಲೆ ಮಧ್ಯರಾತ್ರಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ವಿಜಯಪುರ ಬಡಾವಣೆಯಲ್ಲಿ 5-6 ಯುವಕರು ಕಳೆದ ವಾರದಿಂದ ಮನೆಗಳ ಹಿಂದೆ-ಮುಂದೆ ಸುತ್ತಾಡುತ್ತಾ ಕಲ್ಲು ಎಸೆಯುವುದು, ಬೈಕ್ ವೀಲಿಂಗ್ ಮಾಡುವುದು, ಡಿಕ್ಕಿ ಹೊಡೆಯುವ ರೀತಿಯಲ್ಲಿ ಓಡಾಡುವುದು ಹಾಗೂ ಹೆಣ್ಣುಮಕ್ಕಳನ್ನು ಹಿಂಬಾಲಿಸುವುದು ಸೇರಿದಂತೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ನಂಬರ್ ಪ್ಲೇಟ್ ಇಲ್ಲದ, ಆಲ್ಟ್ರೇಷನ್ ಮಾಡಿದ ಬೈಕ್ಗಳಲ್ಲಿ ಹೆಲ್ಮೆಟ್, ಮಾಸ್ಕ್, ಟೋಪಿ ಧರಿಸಿ ಗುರುತಾಗದಂತೆ ಸಂಚರಿಸುತ್ತಿದ್ದರು ಎನ್ನಲಾಗಿದೆ. ಘಟನೆ ಬಳಿಕ ಇಬ್ಬರು ಯುವಕರು ಸಿಕ್ಕಿಬಿದ್ದಿದ್ದು, ಅವರನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.ಘಟನೆ ನಡೆದ ಮನೆಗೆ ಬಿಜೆಪಿ ಮಹಿಳಾ ಮೋರ್ಚಾ ಭೇಟಿ ನೀಡಿ ಮಹಿಳೆಯಿಂದ ಮಾಹಿತಿ ಪಡೆದಿದ್ದು, 112ಕ್ಕೆ ಕರೆ ಮಾಡಿದರೂ ಸಮಯಕ್ಕೆ ಸ್ಪಂದನೆ ಸಿಗಲಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ಬಸವನಹಳ್ಳಿ ಪೊಲೀಸ್ ಠಾಣೆ ಹಾಗೂ ಸರ್ಕಾರಿ ಆಸ್ಪತ್ರೆ ಮುಂದೆ ಎರಡೂ ಕೋಮಿನ ನೂರಾರು ಯುವಕರು ಜಮಾಯಿಸಿ ಪರಸ್ಪರ ಆರೋಪ-ಪ್ರತ್ಯಾರೋಪ ನಡೆಸಿದ ಪರಿಣಾಮ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಯಿತು. ಕಲ್ಲು ತೂರಿದವರು ತಮ್ಮವರಲ್ಲ ಎಂದು ಒಂದು ಕೋಮಿನವರು ವಾದಿಸಿದರೆ, ಹಲ್ಲೆ ಮಾಡಿದವರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಇನ್ನೊಂದು ಕೋಮಿನವರು ಆಗ್ರಹಿಸಿದರು. ಪೊಲೀಸರು ತಕ್ಷಣ ಎಚ್ಚರಿಕೆ ಕ್ರಮ ಕೈಗೊಂಡು ಠಾಣೆ ಹಾಗೂ ಆಸ್ಪತ್ರೆ ಬಳಿ ಗುಂಪು ಸೇರದಂತೆ ನಿಯಂತ್ರಣ ಸಾಧಿಸಿದ್ದು, ಹಲ್ಲೆಗೊಳಗಾದವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.




