
ಕೊಟ್ಟಿಗೆಹಾರ: ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನ ಕೆ.ಎಲ್. ಶಿವಣ್ಣ ಅವರು ಕಳೆದ ಮೂವತ್ತೇಳು ವರ್ಷಗಳಿಂದ ಧರ್ಮಸ್ಥಳಕ್ಕೆ ಸುದೀರ್ಘ ಪಾದಯಾತ್ರೆ ನಡೆಸುತ್ತಾ ಅನ್ನದಾನ ಸೇವೆ ಮಾಡುತ್ತ ಗಮನ ಸೆಳೆದಿದ್ದಾರೆ. ಶಿವರಾತ್ರಿಯ ಅಂಗವಾಗಿ ಪ್ರತಿವರ್ಷ 50–60 ಜನರ ತಂಡದೊಂದಿಗೆ ಶಿವಣ್ಣ, ಮುರುಗ ಮತ್ತು ಕೆ.ಎಲ್. ಜಗದೀಶ್ ಅವರ ನೇತೃತ್ವದಲ್ಲಿ ಬೆಂಗಳೂರಿನಿಂದ ಧರ್ಮಸ್ಥಳದವರೆಗೆ ಪಾದಯಾತ್ರೆ ಕೈಗೊಳ್ಳಲಾಗುತ್ತದೆ. ಈ ಪ್ರಯಾಣದ ವೇಳೆ 31 ಸ್ಥಳಗಳಲ್ಲಿ ಸಾವಿರಾರು ಭಕ್ತರಿಗೆ ಊಟ, ತಿಂಡಿ, ಕಾಫಿ–ಟೀ ಸೇರಿದಂತೆ ಅನ್ನದಾನ ವ್ಯವಸ್ಥೆ ಮಾಡಲಾಗುತ್ತದೆ. ಇತ್ತೀಚೆಗೆ ಅಪಘಾತದಿಂದ ಕಾಲಿಗೆ ಗಾಯವಾದರೂ ಹರಕೆಯಂತೆ ನಡಿಗೆಯನ್ನು ಮುಂದುವರಿಸಿರುವ ಶಿವಣ್ಣ ಅವರಿಗೆ ಧರ್ಮಸ್ಥಳ ಮಂಜುನಾಥನ ಕೃಪೆಯೇ ಶಕ್ತಿ ಎನ್ನುತ್ತಾರೆ. ಪ್ರತಿವರ್ಷ ಕೊಟ್ಟಿಗೆಹಾರದ ಸರ್ಕಾರಿ ಪ್ರೌಢಶಾಲೆಯಲ್ಲಿ ಹರಿಕಥೆ ಸೇರಿದಂತೆ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿ, ನಡೆಯಿಂದ ಬಳಲಿದ ಪಾದಯಾತ್ರಿಕರಿಗೆ ಮನೋಲ್ಲಾಸ ನೀಡಲಾಗುತ್ತದೆ ಎಂದು ಮುರುಗ ತಿಳಿಸಿದ್ದಾರೆ. ಕೊಟ್ಟಿಗೆಹಾರ ಗ್ರಾಮದೊಂದಿಗೆ ಈ ತಂಡಕ್ಕೆ ಅವಿನಾಭಾವ ಸಂಬಂಧವಿದ್ದು, ಗ್ರಾಮಸ್ಥರಿಗೆ ಹಾಗೂ ಪಾದಯಾತ್ರಿಕರಿಗೆ ನಾನಾ ವಿಧದ ಪಲ್ಯ, ಸಿಹಿ ಹಾಗೂ ಅನ್ನಸಂತರ್ಪಣೆ ಮಾಡಿ ಒಂದು ದಿನ ವಾಸ್ತವ್ಯ ಹೂಡಿ, ನಂತರ ಉಜಿರೆಯಲ್ಲಿ ತಂಗಿ ಮಾರನೇ ದಿನ ಧರ್ಮಸ್ಥಳ ತಲುಪಿ ಮಂಜುನಾಥ ಸ್ವಾಮಿಯ ದರ್ಶನ ಪಡೆಯುವುದು ಇವರ ಪರಂಪರೆಯಾಗಿದೆ. ಪಾದಯಾತ್ರೆ ಮಾರ್ಗದ 31 ಸ್ಥಳಗಳಲ್ಲಿ ಗ್ರಾಮಸ್ಥರ ಪ್ರೀತಿ-ಆದರವನ್ನು ಗಳಿಸಿರುವ ಶಿವಣ್ಣರನ್ನು ಜನರು ಹರಸಿ ಬೀಳ್ಕೊಡುತ್ತಾರೆ ಎಂದು ಜಗದೀಶ್ ಸಂತಸ ವ್ಯಕ್ತಪಡಿಸಿದ್ದಾರೆ.




