
ಮೂಡಿಗೆರೆ: ಪಟ್ಟಣ ಪಂಚಾಯಿತಿಯಿಂದ ವರ್ತಕರ ಪರವಾನಿಗೆ ಶುಲ್ಕವನ್ನು ಹತ್ತು ಪಟ್ಟು ಹೆಚ್ಚಿಸಿರುವುದನ್ನು ವಿರೋಧಿಸಿ ಪಟ್ಟಣದ ವರ್ತಕರ ಸಂಘದ ಸದಸ್ಯರು ಪಂಚಾಯಿತಿ ಕಚೇರಿಗೆ ತೆರಳಿ ಆಡಳಿತಾಧಿಕಾರಿ ತಹಶಿಲ್ದಾರ್ ಅಶ್ವಿನಿ ಅವರಿಗೆ ಮನವಿ ಸಲ್ಲಿಸಿದರು. ಬಜೆಟ್ ಪೂರ್ವಭಾವಿ ಸಭೆಯ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಆದರ್ಶ್, ಸಾವಿರ ರೂ. ಇದ್ದ ಲೈಸೆನ್ಸ್ ಶುಲ್ಕವನ್ನು 10 ಸಾವಿರಕ್ಕೆ ಹಾಗೂ ಎರಡು ಸಾವಿರ ರೂ. ಇದ್ದುದನ್ನು 20 ಸಾವಿರಕ್ಕೆ ಏರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಪಟ್ಟಣದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಪ್ರವೇಶ, ಮೂಲಭೂತ ಸೌಕರ್ಯದ ಕೊರತೆ ಹಾಗೂ ಗ್ರಾಹಕರ ಅಭಾವದಿಂದ ತಿಂಗಳಿಗೆ 10 ಸಾವಿರ ರೂ. ವ್ಯಾಪಾರವೂ ಕಷ್ಟವಾಗಿರುವ ಸ್ಥಿತಿ ನಿರ್ಮಾಣವಾಗಿದ್ದು, ಅನೇಕ ಅಂಗಡಿಗಳು ಬಂದ್ ಆಗುತ್ತಿವೆ ಎಂದರು. ಇಂತಹ ಸಂದರ್ಭದಲ್ಲಿ ಶುಲ್ಕವನ್ನು ಹತ್ತು ಪಟ್ಟು ಹೆಚ್ಚಿಸಿರುವುದು ವರ್ತಕರಿಗೆ ತೀವ್ರ ಸಂಕಷ್ಟ ತಂದೊಡ್ಡಿದ್ದು, ಇದರ ಹೊರೆ ಗ್ರಾಹಕರ ಮೇಲೆಯೇ ಬೀಳಲಿದೆ ಎಂದು ಎಚ್ಚರಿಸಿದರು. ಶುಲ್ಕವನ್ನು ತಕ್ಷಣ ಪುನರ್ ಪರಿಶೀಲಿಸಿ ಹಳೆಯದರನ್ನೇ ಮುಂದುವರಿಸದಿದ್ದರೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪಟ್ಟಣ ಪಂಚಾಯಿತಿ ಮುಂದೆ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರದ ಬಹುತೇಕ ವರ್ತಕರು ಬೆಳಿಗ್ಗೆ 11ರಿಂದ 12 ಗಂಟೆವರೆಗೆ ಸಾಂಕೇತಿಕ ಬಂದ್ ಮಾಡಿ ಪಂಚಾಯಿತಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.





