
ಚಿಕ್ಕಮಗಳೂರು: ಮಲೆನಾಡಿಗರಲ್ಲಿ ಆತಂಕ ಮೂಡಿಸಿದ ಲಘು ವಿಮಾನವೊಂದು ಭದ್ರಾ ನದಿಯ ಹಾಸುಪಾಸಿನಲ್ಲಿ ಎರಡು ಬಾರಿ ತೀರಾ ಕೆಳಭಾಗದಲ್ಲೇ ಹಾರಾಟ ನಡೆಸಿದ್ದು, ಕಳಸ ತಾಲೂಕಿನಿಂದ ಬಾಳೆಹೊನ್ನೂರು ಸುತ್ತಮುತ್ತ ಸಂಚರಿಸಿ ಬಳಿಕ ಶಿವಮೊಗ್ಗ ಭಾಗದತ್ತ ತೆರಳಿದೆ. ಯಾರದ್ದು, ಒಳಗೆ ಯಾರು ಇದ್ದರು, ಎಲ್ಲಿಂದ ಬಂದು ಎಲ್ಲಿಗೆ ಹೋಯಿತು ಎಂಬ ಬಗ್ಗೆ ಪೊಲೀಸ್ ಹಾಗೂ ಅರಣ್ಯ ಇಲಾಖೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಇದು ಹಣವಂತರ ಶೋಕಿ ಹಾರಾಟವೋ ಅಥವಾ ಯಾವುದಾದರೂ ಇಲಾಖೆಯ ಸರ್ವೇ ಕಾರ್ಯವೋ ಎಂಬುದೂ ಗೊತ್ತಿಲ್ಲ. ಬಾಳೆಹೊನ್ನೂರಲ್ಲಿ ಕೆಳಭಾಗದಲ್ಲಿ ಹಾರಿದ ದೃಶ್ಯಗಳು ಮೊಬೈಲ್ನಲ್ಲಿ ಸೆರೆಗೊಂಡಿದ್ದು, ಲಘು ವಿಮಾನದ ಹಿನ್ನೆಲೆ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.





