ಬೆಂಗಳೂರು: ಮಕರ ಸಂಕ್ರಾಂತಿ ಸಮೀಪಿಸುತ್ತಿದ್ದು, ಈ ವರ್ಷ ಹಬ್ಬವನ್ನು ಜನವರಿ 14 ಅಥವಾ 15ರಂದು ಆಚರಿಸಬೇಕೇ ಎಂಬ ಬಗ್ಗೆ ಜನರಲ್ಲಿ ಗೊಂದಲ ಉಂಟಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸೂರ್ಯನು ಮಕರ ರಾಶಿಗೆ ಪ್ರವೇಶಿಸಿದ ಕ್ಷಣದಿಂದ ಮಕರ ಸಂಕ್ರಾಂತಿ ಆರಂಭವಾಗುತ್ತದೆ. 2026ರಲ್ಲಿ ಸೂರ್ಯನು ಜನವರಿ 14ರಂದು ಮಧ್ಯಾಹ್ನ 3:13ಕ್ಕೆ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಆದರೆ ಶಾಸ್ತ್ರಾನುಸಾರ ಮಧ್ಯಾಹ್ನದ ನಂತರ ಶುಭ ಹಬ್ಬಗಳನ್ನು ಆಚರಿಸುವುದು ಸರಿಯಲ್ಲ. ಆದ್ದರಿಂದ ನಿರ್ಣಯ ಸಿಂಧು ಹಾಗೂ ಜ್ಯೋತಿಷ್ಯಜ್ಞರ ಅಭಿಪ್ರಾಯದಂತೆ, ಮಕರ ಸಂಕ್ರಾಂತಿಯ ಶುಭ ಕಾಲ ಜನವರಿ 15ರಂದು ಸೂರ್ಯೋದಯದ ನಂತರ ಲಭಿಸುತ್ತದೆ. ಈ ಕಾರಣದಿಂದ ಜನವರಿ 15ರ ಗುರುವಾರದಂದು ಮಕರ ಸಂಕ್ರಾಂತಿಯನ್ನು ಆಚರಿಸುವುದೇ ಶಾಸ್ತ್ರಸಮ್ಮತವಾಗಿದೆ. ಪುಣ್ಯಕಾಲವು ಜನವರಿ 14ರಂದು ಮಧ್ಯಾಹ್ನ 3:13ರಿಂದ ಸಂಜೆ 6:15ರವರೆಗೆ ಇದ್ದರೂ, ಪವಿತ್ರ ಸ್ನಾನ, ದಾನ, ಸೂರ್ಯನಿಗೆ ನೈವೇದ್ಯ ಹಾಗೂ ಧಾರ್ಮಿಕ ಆಚರಣೆಗಳನ್ನು ಮುಖ್ಯವಾಗಿ ಜನವರಿ 15ರಂದು ನೆರವೇರಿಸುವುದು ಶ್ರೇಷ್ಠವೆಂದು ವಿದ್ವಾಂಸರು ತಿಳಿಸಿದ್ದಾರೆ.
