ಫೆಬ್ರವರಿ 1ರಂದು ಭಾನುವಾರವೇ ಕೇಂದ್ರ ಬಜೆಟ್ 2026 ಅನ್ನು ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ದಿನಾಂಕ ಬದಲಾವಣೆ ಸಾಧ್ಯತೆ ಇಲ್ಲ ಎನ್ನಲಾಗಿದೆ. ಸಂಸತ್ತಿನ ಬಜೆಟ್ ಅಧಿವೇಶನದ ದಿನಾಂಕಗಳ ಕುರಿತು ಇನ್ನೂ ಅಧಿಕೃತ ಘೋಷಣೆ ಬಾಕಿ ಇದ್ದರೂ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸತತ 9ನೇ ಬಜೆಟ್ ಆಗಿದ್ದು, ಸ್ವಾತಂತ್ರ್ಯಾನಂತರದ 80ನೇ ಕೇಂದ್ರ ಬಜೆಟ್ ಅನ್ನು ಮಂಡಿಸುವ ವಿಶೇಷ ಗೌರವವೂ ಇದರಿಂದ ದೊರೆಯಲಿದೆ. ವಾರಾಂತ್ಯದಲ್ಲಿ ಬಜೆಟ್ ಮಂಡಿಸುವುದು ಹೊಸದಲ್ಲ, ಇದಕ್ಕೂ ಮುನ್ನ ಶನಿವಾರಗಳಲ್ಲೂ ಬಜೆಟ್ ಮಂಡನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಹಾಗೂ ಮೂರನೇ ಅವಧಿಗಳಲ್ಲೂ ಹಣಕಾಸು ಖಾತೆ ನಿರ್ವಹಿಸುತ್ತಿರುವ ನಿರ್ಮಲಾ ಸೀತಾರಾಮನ್, ದೇಶದ ದೀರ್ಘಾವಧಿ ಹಣಕಾಸು ಸಚಿವರ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ.
