‘ವಸುದೈವ ಕುಟುಂಬಕಂ’ ಎಂಬ ತತ್ತ್ವದಂತೆ ಇಡೀ ವಿಶ್ವವೇ ಒಂದು ಕುಟುಂಬ ಎಂಬ ಸಂದೇಶವನ್ನು ಸಾರುವ ಜಾಗತಿಕ ಕುಟುಂಬ ದಿನವನ್ನು ಪ್ರತಿ ವರ್ಷ ಜನವರಿ 1ರಂದು ಆಚರಿಸಲಾಗುತ್ತದೆ. ರಾಷ್ಟ್ರಗಳು, ಧರ್ಮಗಳು ಮತ್ತು ಸಂಸ್ಕೃತಿಗಳ ನಡುವಿನ ಏಕತೆ, ಶಾಂತಿ ಹಾಗೂ ಸಹೋದರತ್ವವನ್ನು ಬೆಳೆಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತಿದ್ದು, ಯುದ್ಧ ಮತ್ತು ಹಿಂಸಾಚಾರವನ್ನು ತಡೆಗಟ್ಟುವ ಸಂದೇಶವನ್ನು ನೀಡುತ್ತದೆ. 2000ರ ಜನವರಿ 1ರಂದು ಮೊದಲ ಬಾರಿ ಅಧಿಕೃತವಾಗಿ ಆಚರಿಸಲಾದ ಈ ದಿನವು, ಕುಟುಂಬಗಳು ಮತ್ತು ಸಮುದಾಯಗಳು ಒಗ್ಗಟ್ಟಿನಿಂದ ಬದುಕಿ ಶಾಂತಿ ಮತ್ತು ಪ್ರೀತಿಯನ್ನು ಹರಡುವಂತೆ ಪ್ರೇರೇಪಿಸುತ್ತದೆ.
