ಬೆಂಗಳೂರು: ದಿನದಿಂದ ದಿನಕ್ಕೆ ದೇಶದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರದ ಪ್ರಕರಣದಲ್ಲಿ ಇದೀಗ ಕರ್ನಾಟಕ ಐದನೇ ಸ್ಥಾನ ಪಡೆದಿರುವುದು ವಿಷಾದನೀಯ ಸಂಗತಿಯಾಗಿದ್ದು, ಅದರ ನಿರ್ಮೂಲನೆಗೆ ಆದಷ್ಟು ಬೇಗ ಕ್ರಮಗಳನ್ನು ಜರುಗಿಸಬೇಕೆಂದು ರಾಜ್ಯದ ಉಪಲೋಕಾಯುಕ್ತ ಜಸ್ಟೀಸ್ ಬಿ.ವೀರಪ್ಪ ಹೇಳಿದ್ದಾರೆ. ಈ ಹಿಂದೆ ಬಿಜೆಪಿ ಪಕ್ಷ ಆಳ್ವಿಕೆ ನಡೆಸುತ್ತಿದ್ದ ಸಂರ್ದಭದಲ್ಲಿ ದೇಶದಲ್ಲೆ ನಂ.1 ಸ್ಥಾನಕ್ಕೇರಿದ್ದ ಕರ್ನಾಟಕ ಇದೀಗ ಶೇ.63 ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ. ಪಕ್ಕದ ರಾಜ್ಯವಾದ ಕೇರಳದಲ್ಲಿ ಶೇ.10 ರಷ್ಟು ಭ್ರಷ್ಟಾಚಾರ ಮಾತ್ರ ಇದೆ. ಪ್ರತಿ ದಿನ ಅನೇಕ ವಿಷಯಗಳಲ್ಲಿ ಬಯಲಾಗುತ್ತಿರುವ ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತು ಹಾಕಲು ನಾನು ಹೋದ ಶಾಲೆ, ಆಸ್ಪತ್ರೆ, ಹಾಸ್ಟೆಲ್ಗಳಲ್ಲಿನ ಸಿಬ್ಬಂದಿಗಳಿಗೆ ಪ್ರೇರೇಪಿಸುತ್ತಿದ್ದೇನೆ. ಈ ಕಾರ್ಯದಲ್ಲಿ ವಕೀಲರೂ ಕೂಡ ಮುಖ್ಯ ಪಾತ್ರ ವಹಿಸಿ ಭ್ರಷ್ಟಾಚಾರದ ನಿರ್ಮೂಲನೆ ಮಾಡಿ ಸಮಾಜವನ್ನು ಒಳ್ಳೆಯ ದಾರಿಗೆ ತರಲು ಪ್ರಯತ್ನಿಸಬೇಕೆಂದು ಉಪಲೋಕಾಯುಕ್ತ ಬಿ.ವೀರಪ್ಪ ಹೇಳಿದರು.
