ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರುವ ಬಾರೀ ಭ್ರಷ್ಟಾಚಾರ ಮತ್ತು ಕರ್ತವ್ಯ ಲೋಪದ ಬಗ್ಗೆ ಹೆಚ್ಚಾಗಿ ದೂರುಗಳು ದಾಖಲಾಗುತ್ತಿರುವ ಹಿನ್ನಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು 9 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸೇರಿ ಒಟ್ಟಾರೆ 12 ಕಛೇರಿಗಳ ಮೇಲೆ ಏಕಾಏಕಿ ದಾಳಿ ನಡೆಸಿದೆ. ಸಾರ್ವಜನಿಕರಿಂದ ಬಂದ ದೂರುಗಳ ಆಧಾರದ ಮೇಲೆ ನಿಜಾಂಶವನ್ನು ತಿಳಿಯಲು ಲೋಕಾಯುಕ್ತ ಅಧಿಕಾರಿಗಳು ಸದ್ದಿಲ್ಲದೆ ತನಿಖೆ ನಡೆಸಿ, ಸತ್ಯತಿಳಿದ ನಂತರ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ ದಾಳಿ ನಡೆಸಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಲಂಚಕ್ಕಾಗಿ ಸಾರ್ವಜನಿಕರನ್ನು ಹಾಗೂ ಶಿಕ್ಷಕರನ್ನು ಪೀಡಿಸುತ್ತಿರುವ ಬಗ್ಗೆ ಅನೇಕ ದೂರು ದಾಖಲಾಗಿತ್ತು, ಆದ್ದರಿಂದ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ರಜೆ ಮಂಜೂರಾತಿ, ವೇತನ ಬಡ್ತಿ ವರ್ಗಾವಣೆ, ನಿವೃತ್ತಿ ವೇತನ ಮತ್ತು ಶಿಸ್ತು ಕ್ರಮ ಲಂಚ ಬೇಡಿಕೆ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಅಂಕಪಟ್ಟಿ ವರ್ಗಾವಣೆ ಪತ್ರ ತಿದ್ದುಪಡಿಗಳಲ್ಲಿ ಭ್ರಷ್ಟಾಚಾರ ನಡೆದಿರುವುದು ತನಿಖೆ ವೇಳೆ ತಿಳಿದಿದ್ದು, ಇನ್ನೂ ಅನೇಕ ವಿಚಾರಗಳು ಪೂರ್ಣ ತನಿಖೆಯ ನಂತರ ಬೆಳಕಿಗೆ ಬರಬೇಕಿದೆ.
