ಬೆಂಗಳೂರು: ರಾಜ್ಯದಲ್ಲಿ 15 ದಿನಗಳಿಂದ ಜೋರಾಗಿದ್ದ ಕುರ್ಚಿ ಕದನಕ್ಕೆ ಕಾವೇರಿ ನಿವಾಸದಲ್ಲಿ ನಡೆದ ಬ್ರೇಕ್ ಫಾಸ್ಟ್ ಮೀಟಿಂಗ್ ಹೊಸ ತಿರುವು ನೀಡಿದರೆ, ಈಗ ಮತ್ತೊಂದು ರಾಜಕೀಯ ಉಪಹಾರ ಕೂಟ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ನಡೆಯಲಿದ್ದು, ಸಿಎಂ ಸಿದ್ಧರಾಮಯ್ಯರಿಗೆ ವಿಶೇಷವಾಗಿ ನಾಟಿಕೋಳಿ ಸಾರು ಸೇರಿದಂತೆ ವೆಜ್-ನಾನ್ವೆಜ್ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಸಿಎಂ ತಮ್ಮ ಮನೆಯಲ್ಲಿ ಡಿಕೆಶಿಗೆ ಉಪಹಾರ ನೀಡಿದ್ದರು, ಅದರ ಪ್ರತಿಯಾಗಿ ಡಿಸಿಎಂ ತಮ್ಮ ಸದಾಶಿವನಗರದ ನಿವಾಸದಲ್ಲಿ ಆತಿಥ್ಯಕ್ಕೆ ಕರೆದಿದ್ದಾರೆ. ಅಧಿಕಾರ ಹಂಚಿಕೆ ವಿವಾದಕ್ಕೆ ಬ್ರೇಕ್ಫಾಸ್ಟ್ ಪಾಲಿಟಿಕ್ಸ್ ಹೊಸ ಆಯಾಮ ನೀಡಿದ್ದು, ನಾಯಕರೂ ತಮ್ಮ ಮಧ್ಯೆ ಭಿನ್ನಾಭಿಪ್ರಾಯಗಳಿಲ್ಲ ಎಂದು ಹೇಳಿಕೊಂಡರೂ, ಹೈಕಮಾಂಡ್ ಈ ಬೆಳವಣಿಗೆಗಳನ್ನೂ ಕಣ್ಣಾರೆ ಗಮನಿಸುತ್ತಿರುವುದಾಗಿ ಮೂಲಗಳು ತಿಳಿಸಿವೆ.
