ಶೃಂಗೇರಿ: ಯಾಂತ್ರಿಕ ಬದುಕಿನಲ್ಲಿ ಸಿಲುಕಿರುವ ನಾವು ಬೆರಳಂಚಿನಲ್ಲಿ ಜಗತ್ತನ್ನು ನಿಯಂತ್ರಿಸುವ ಮಟ್ಟದಲ್ಲಿ ಇದ್ದೇವೆ, ಅದರಲ್ಲಿ ಡಿಜಿಟಲ್ ವ್ಯವಹಾರ ಕೂಡ ಒಂದು ಭಾಗ ಆದರೆ ಅದು ಎಷ್ಟು ಸುರಕ್ಷಿತ? ಇಂತಹ ಪ್ರಶ್ನೆ ಏಕೆ ಉಂಟಾಯಿತು ಎಂದರೆ, ರವೀಂದ್ರ ಎನ್ನುವ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ನಿಂದ ಪತ್ನಿಗೆ ₹10,000 ಫೋನ್ ಪೇ ಮಾಡಿದ್ದರು, ಆದರೆ ಅದು ಮೈಸೂರು ಜೆ.ಎಸ್.ಎಸ್ ಲೇಔಟ್ನ ಸಲ್ಮಾಬಾನು ಎಂಬುವವರ ಅಕೌಂಟ್ಗೆ ಜಮೆಯಾಗಿದೆ. ಇದನ್ನು ತಿಳಿದ ರವೀಂದ್ರ ಅವರು ತಕ್ಷಣ ಬ್ಯಾಂಕ್ ಮ್ಯಾನೇಜರ್ ಅವರನ್ನು ಸಂಪರ್ಕಿಸಿ ಅಕೌಂಟ್ ಹೋಲ್ಡ್ ನಲ್ಲಿ ಇರಿಸಿದ್ದಾರೆ, ಆದರೆ ಖಾತೆದಾರರು ಖಾತೆಯ ಮೊಬೈಲ್ ಅಪ್ಡೇಟ್ ಮಾಡದ ಕಾರಣ ಹಣ ಹಿಂಪಡೆಯುವುದು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಈಗಾಗಲೇ ಬಳಸಿದ ಜಿಯೋ ಸಿಮ್ ಅನ್ನು ಮತ್ತೇ ಮರು ಮಾರಾಟ ಮಾಡಿ ಮಂಜುಳ ಅವರಿಗೆ ನೀಡಿದ ಪರಿಣಾಮ ಈ ಗೊಂದಲ ಉಂಟಾಗಿದ್ದು, ಫೋನ್ ಮಾಡಿದರೆ ಮಂಜುಳಾ ಅವರಿಗೆ, ಹಣ ಕಳಿಸಿದರೆ ಸಲ್ಮಾ ಬಾನು ಅವರಿಗೆ ತಲುಪುತ್ತಿದ್ದು, ಇದರಲ್ಲಿ ಫೋನ್ ಪೇ ತಪ್ಪೋ? ಅಥವಾ ಸಿಮ್ ಮಾರಾಟ ಮಾಡಿದವರ ತಪ್ಪೋ? ಇಲ್ಲಾ ಖಾತೆದಾರರ ತಪ್ಪೋ ಎಂದು ತಿಳಿಯದ ಪರಿಸ್ಥಿತಿ ಎದುರಾಗಿದೆ. ಇನ್ನೂ ಮುಂದೆ ಈ ಡಿಜಿಟಲ್ ಸೇವೆಯನ್ನು ಬಳಸುವವರು ಆದಷ್ಟು ಎಚ್ಚರಿಕೆಯಿಂದ ಉಪಯೋಗಿಸುವುದು ಒಳಿತು.
