ಕೊಟ್ಟಿಗೆಹಾರ: ಮೂಡಿಗೆರೆ ತಾಲ್ಲೂಕಿನ ಹೆಗ್ಗುಡ್ಲು ಗ್ರಾಮದ ಕಲ್ಯಾಣಗದ್ದೆ ರಸ್ತೆ ಹಲವು ವರ್ಷಗಳಿಂದ ಹದಗೆಟ್ಟರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಯಾವುದೇ ಸ್ಪಂದನೆ ದೊರೆಯದ ಕಾರಣ ಗ್ರಾಮಸ್ಥರು ಬೇಸತ್ತು ಸ್ವಂತವಾಗಿ ಕ್ರಮ ಕೈಗೊಂಡಿದ್ದು ಸುಮಾರು 2 ಲಕ್ಷ ರೂಪಾಯಿ ಸಂಗ್ರಹಿಸಿ ರಸ್ತೆಯ ಆಳವಾದ ಗುಂಡಿಗಳನ್ನು ಮುಚ್ಚಿ ದುರಸ್ತಿ ಕಾರ್ಯವನ್ನು ಸ್ವಯಂಪ್ರೇರಿತವಾಗಿ ಪೂರ್ಣಗೊಳಿಸಿದ್ದಾರೆ. ಮಳೆಗಾಲದಲ್ಲಿ ಮೊಣಕಾಲು ಮಟ್ಟಕ್ಕೆ ನೀರುನಿಂತು, ರಾಡುಗಳು ಮೇಲೆದ್ದು ಸಂಚಾರಕ್ಕೆ ತೊಂದರೆ, ಜೀವಕ್ಕೆ ಅಪಾಯ ಉಂಟಾಗುತ್ತಿದ್ದರೂ ಸರ್ಕಾರದಿಂದ ಸಹಾಯ ದೊರಕದ ಕಾರಣ, ಗ್ರಾಮಸ್ಥರು ತಮ್ಮ ಕೆಲಸಕಾರ್ಯಗಳನ್ನು ಬದಿಗಿಟ್ಟು ಗ್ರಾಮದ ಹಿತಕ್ಕಾಗಿ ಶ್ರಮಿಸಿದರು. ಅನೇಕ ಬಾರಿ ಮನವಿ ಮಾಡಿದರೂ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಈ ಸಂಕಲ್ಪ ಈಗ ಮಾದರಿಯಾಗಿದೆ.
