“ನಂಗಿನ್ನು ಅವನ ಜೊತೆ ಬದುಕೋಕೆ ಸಾಧ್ಯವೇ ಇಲ್ಲ” ಹಾಗಂತ ಗೆಳತಿಯೊಬ್ಬಳು ಮೆಸೇಜ್ ಹಾಕಿದ್ದಳು. ಎರಡು-ಮೂರು ವರುಷದ ಹಿಂದೆ ಮದುವೆಯಾಗಿ ಒಂದು ಪುಟ್ಟ ಮಗುವಿದ್ದ ಸುಂದರ ದಾಂಪತ್ಯ ಆ ಹೊತ್ತಿಗಾಗಲೇ ಹಳಸಿತ್ತು. ಹುಡುಗನೂ ಪರಿಚಿತನೇ ಆಗಿದ್ದರಿಂದ ಅವನಿಗೆ ಒಂದು ಕಾಲ್ ಮಾಡಿದ್ರೆ, “ನಾನು ಎಷ್ಟೂ ಅಂತ ಸಹಿಸಿಕೊಳ್ಳೋದು ರಾಘು, ಹೇಗಿದ್ರು ಅವಳಿಗೆ ಸರಿ ಆಗಲ್ಲ… ಮಾತೆತ್ತಿದ್ರೆ ನಾನು ಡಿವೋರ್ಸ್ ಕೊಡ್ತೀನಿ ಅಂತಾಳೆ. ಇನ್ನೂ ನಾನೇನು ಹೇಳೋದು… ಅಂತ ಅಸಹಾಯಕತೆಯಲ್ಲಿಯೇ ಅಂಗೀಕಾರ ಸೂಚಿಸಿದ. ಹೊಂದಿಕೊಂಡು ಹೋಗೋದಿಕ್ಕೆ ಟ್ರೈ ಮಾಡೇ, ಮಗು ಇದೆ ಅಲ್ವಾ ಅಂತ ಅವಳನ್ನು ಕನ್ವಿನ್ಸ್ ಮಾಡಲು ಪ್ರಯತ್ನಿಸಿದೆ. “ಇಲ್ಲ ರಾಘು ಈ ಹಿಂಸೆ ಅನುಭವಿಸ್ತಾ ದಿನಾ ಉಸಿರು ಕಟ್ಟಿಕೊಂಡು ಬದುಕೋದಕ್ಕಿಂತ ಒಂಟಿಯಾಗಿ ಬದುಕೋದು ಬೆಸ್ಟ್. ಮಗು ನಂಜೊತೆಲಿರತ್ತೆ. ಅದನ್ನ ಸಾಕೋ ತಾಕತ್ತು ನಂಗಿದೆ” ಅಂತ ಸ್ಪಷ್ಟವಾಗಿ ಹೇಳಿದಳು. “ನಿಮ್ಮ ಮನೇಲಿ ಏನಂದ್ರು” ಅಂತಂದೆ, ಅಪ್ಪ ಅಮ್ಮ “ನಿಂಗೆ ಹೇಗೆ ಸರಿ ಅನ್ಸುತ್ತೋ ಹಾಗೆ ಮಾಡು ಅಂದಿದಾರೆ ಅಂದ್ಲು…! ಅಪ್ಪ ಅಮ್ಮ ಅಂತಹದೊಂದು ಮಾತು ಹೇಳಿದ್ದಾರೆ ಅನ್ನೋದು ನಿಜಕ್ಕೂ ಶಾಕ್ ಆಯ್ತು. ಮಗುವನ್ನು ಸಾಕೋ ತಾಕತ್ತು ನಂಗಿದೆ ಅಂತ ಅವಳು ಹೇಳುವಾಗ ನಂಗೆ ಅನಿಸಿದ್ದು ಮಕ್ಕಳನ್ನು ಬೆಳೆಸೋದಕ್ಕೆ ತಾಕತ್ತು ಬೇಕಾ…. ತಾಕತ್ತು ಅಂದ್ರೆ ದುಡ್ಡು..? ಇರಬಹುದು ಮಗುವಿಗೆ ವಿದ್ಯಾಭ್ಯಾಸ ಕೊಡಿಸಲು ಸಾಕಷ್ಟು ಹಣ ಬೇಕು. ಅದರಲ್ಲೂ ಹೀಗೆ ಸಿಂಗಲ್ ಪೇರೆಂಟ್ ಅನಿಸಿಕೊಂಡಾಗ ಬೇಕಾಬಿಟ್ಟಿ ಸೇರಿಸೋಕಾಗಲ್ಲ ’ಲೆವೆಲ್’ ತೋರಿಸೋದು ಮುಖ್ಯವಾಗಿರತ್ತೆ. ಅದಿರಲಿ ಅವಳು ಮಗುವಿಗೆ ಒಳ್ಳೆ ಬಟ್ಟೆ, ಒಳ್ಳೆಯ ಸ್ಕೂಲ್, ಟ್ಯೂಷನ್ ಎಲ್ಲವನ್ನೂ ಕೊಡಿಸುತ್ತಾಳೆ. ಆದರೆ ಅಪ್ಪನ ಅಕ್ಕರೆ..? ಊಹುಂ ಅದನ್ನು ಎಷ್ಟು ಕೋಟಿ ಕೊಟ್ಟರು ಖರೀದಿಸಲು ಆಗದು. ಈ ಮಾಡರ್ನ್ ಯುಗ ಅನ್ನೋದು ಎಳೆಯ ಕಂದಮ್ಮಗಳ ಪಾಲಿಗೆ ಅಪ್ಪ ಅಮ್ಮ ಇದ್ದೂ ’ಅನಾಥ’ ಅನ್ನೋ ದೌರ್ಭಾಗ್ಯ ಒದಗಿಸುತ್ತಿರುವುದು ದುರಂತವೇ ಸರಿ. ನಿಶ್ಚಿತಾರ್ಥ, ಪ್ರೀವೆಡ್ಡಿಂಗ್, ಹಳದಿ, ಮೆಹಂದಿ, ರಿಸೆಪ್ಷನ್, ಅದ್ದೂರಿ ಮದುವೆ, ಹನಿಮೂನ್ ಇದಾವುದು ಗಂಡ ಹೆಂಡಿತಿಯರ ನಡುವೆ ಬಾಂಧವ್ಯ ಬೆಸೆಯುವ ಕೊಂಡಿಗಳಾಗದೆ ಕೇವಲ ಸೋಶಿಯಲ್ ಮೀಡಿಯಾ ಶೋ ಮೆಟೇರಿಯಲ್ಗಳಾಗಿರುವುದೇ ವಿಪರ್ಯಾಸ! ಈ ನಡುವೆ ಬೈ ಆಕ್ಸಿಡೆಂಟ್ ನಲ್ಲಿ ಹುಟ್ಟುವ ಮಕ್ಕಳಿದ್ದು ಅದಾವ ಪೂರ್ವ ಜನ್ಮದ ಪಾಪವೋ? ನಮ್ಮ ಯುವ ಜನತೆಗೆ ಯಾಕೆ ಲೈಫು ಇಷ್ಟು ಸಿಲ್ಲಿ ಅನಿಸುತ್ತದೆ ಅಂತ ನೋಡಿದರೆ…ಅಪ್ಪ ಅಮ್ಮಂದಿರ ತಪ್ಪು ಎದ್ದು ಕಾಣಿಸುತ್ತದೆ. ಚಿಕ್ಕಲ್ಲಿನಲ್ಲಿಯೇ ಮಕ್ಕಳನ್ನು ಹಾಸ್ಟೆಲ್ನಲ್ಲಿರಿಸಿ ಊರ ಹಬ್ಬ, ಜಾತ್ರೆ, ಮನೆಯ ಕಾರ್ಯಕ್ರಮ, ಬಂಧುಗಳ ಔತಣ ಕೂಟ ಯಾವುದಕ್ಕೂ ಬಾರದಂತೆ ತಡೆದು ಮುಂದೆ ಕೆಲಸದ ನೆಪದಲ್ಲಿ ತಮ್ಮಿಂದ ದೂರ ಉಳಿಯುವ ಮಕ್ಕಳಿಗೆ ಚಿಕ್ಕಮ್ಮ, ಚಿಕ್ಕಪ್ಪ, ಅತ್ತೆ, ಮಾವ, ಅಣ್ಣ, ತಮ್ಮ ಹೀಗೆ ಯಾವ ಸಂಬಂಧಗಳ ಮೌಲ್ಯವು ಅರಿವಾಗದೇ ಮುಂದೆ ತಮ್ಮ ಕೈಯಲ್ಲಿರುವ ಕೆಲಸ, ತಿಂಗಳ ಸಂಬಳ, ಸೋಶಿಯಲ್ ಮೀಡಿಯಾಗಳ ಭ್ರಮಾ ಲೋಕದೊಳಗೆ ಕಳೆದು ಹೋಗುವ ಹುಡುಗ-ಹುಡುಗಿಗೆ ಮಕ್ಕಳನ್ನು ಬೆಳೆಸಲು ’ತಾಕತ್ತು’ ಮುಖ್ಯ ಅನಿಸುತ್ತದೆಯೇ ಹೊರತು ಆ ಮಗುವಿನ ಮುಗ್ದ ಮನಸ್ಸಿನ ಅಂತರಂಗ ಅರಿವಾಗದು. ಎಲ್ಲದಕ್ಕಿಂತ ಮುಖ್ಯವಾಗಿ ಇನ್ಸ್ಟಾಗ್ರಾಮ್ನ ಫಾಲೋವರ್ಸ್ಗಳು ನಾನೆಷ್ಟು ತಬ್ಬಲಿ ಎಂದು ನಮಗೆ ಅರಿವಾಗಿಸಲು ಬಿಡುತ್ತಿಲ್ಲ. ಇದು ಈ ಸಮಾಜದ ದೊಡ್ಡ ದುರಂತ..!
