ಕಾರ್ಮಿಕ ಕಾನೂನುಗಳಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಕೇಂದ್ರ ಸರಕಾರ ಜಾರಿಗೆ ತರುವುದರ ಮೂಲಕ ಕಾರ್ಮಿಕರಿಗೆ ಸಿಹಿ ಸುದ್ದಿಯನ್ನು ನೀಡಿದೆ. 29 ಕಾರ್ಮಿಕ ಕಾನೂನುಗಳನ್ನು ಒಗ್ಗೂಡಿಸಿ ರೂಪಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿಗೆ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ವೇತನ ಸಂಹಿತೆ (2020), ಕೈಗಾರಿಕೆ ಸಂಬಂಧಗಳ ಸಂಹಿತೆ (2019), ಸಾಮಾಜಿಕ ಭದ್ರತಾ ಸಂಹಿತೆ (2020), ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯನಿರ್ವಹಣೆ ಸ್ಥಿತಿ ಸಂಹಿತೆ (2020) ಶುಕ್ರವಾರದಿಂದಲೇ ಜಾರಿಗೆ ಬಂದಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತಿಳಿಸಿದೆ.
ಎಲ್ಲ ಉದ್ಯೋಗದಾತರು ಕಡ್ಡಾಯವಾಗಿ ನೇಮಕಾತಿ ಪತ್ರಗಳನ್ನು ನೀಡಬೇಕು. ಪ್ರತಿ ತಿಂಗಳು 7ನೇ ತಾರೀಖಿನ ಒಳಗೆ ವೇತನ ಪಾವತಿಸಬೇಕು. ಯಾವುದೇ ಉದ್ಯೋಗವಾದರೂ ಮಹಿಳೆಯರಿಗೆ ರಾತ್ರಿಪಾಳಿ ಕೆಲಸಗಳಿಗೆ ಅವಕಾಶ ಹಾಗೂ ರಾತ್ರಿಪಾಳಿಯಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು. 40 ವರ್ಷ ಮೇಲ್ಪಟ್ಟ ವಯೋಮಾನದ ಎಲ್ಲ ಕೆಲಸಗಾರರಿಗೆ ವಾರ್ಷಿಕವಾಗಿ ಉಚಿತ ಆರೋಗ್ಯ ತಪಾಸಣೆ ಮಾಡಿಸಬೇಕು ಎನ್ನುವುದು ಹೊಸ ಕಾರ್ಮಿಕ ಸಂಹಿತೆಗಳ ಪ್ರಮುಖ ಸಂಗತಿಗಳಾಗಿವೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮಗಳಲ್ಲಿ ಏನಿದೆ?
- ಎಲ್ಲಾ ಕಾರ್ಮಿಕರಿಗೂ ನೇಮಕಾತಿ ಪತ್ರ ನೀಡುವುದು ಕಡ್ಡಾಯವಾಗಿರುತ್ತದೆ.
- ಎಲ್ಲಕಾರ್ಮಿಕರಿಗೂ ಪಿಎಫ್, ಇಎಸ್ಐ, ವಿಮೆ ಸೌಲಭ್ಯ ನೀಡಬೇಕು.
- ಒಂದು ವರ್ಷ ಸೇವಾವಧಿ ಪೂರೈಸಿದ ಬಳಿಕ ಗ್ರಾಚ್ಯುಟಿ ಅರ್ಹತೆ ನೀಡಬೇಕು
- ಎಲ್ಲ ಕಾರ್ಮಿಕರಿಗೆ ಕನಿಷ್ಠ ವೇತನ, ಸಕಾಲ ವೇತನ ಪಾವತಿ ಕಡ್ಡಾಯವಾಗಿರುತ್ತದೆ.
- 40 ವರ್ಷ ವಯಸ್ಸು ಮೀರಿದ ಕೆಲಸಗಾರರಿಗೆ ವಾರ್ಷಿಕವಾಗಿ ಉಚಿತ ಆರೋಗ್ಯ ತಪಾಸಣೆ ಸೌಲಭ್ಯ ನೀಡಬೇಕು.
- ಮಹಿಳಾ ಕಾರ್ಮಿಕರಿಗೂ ಸಮಾನ ವೇತನ ಪಾವತಿಸಬೇಕು.
- ಮಹಿಳೆಯರಿಗೆ ಗಣಿಗಾರಿಕೆ ಸೇರಿದಂತೆ ಎಲ್ಲಾ ವಲಯಗಳಲ್ಲೂ ರಾತ್ರಿ ಪಾಳಿಗೆ ಅವಕಾಶ.
- ಕುಂದುಕೊರತೆ ಪರಿಹಾರ ಸಮಿತಿಗಳಲ್ಲಿ ಮಹಿಳಾ ಪ್ರಾತಿನಿಧ್ಯ ಕಡ್ಡಾಯ.
- ಉದ್ಯಮಗಳಿಗೆ ಒಂದೇ ಕಡೆ ನೋಂದಣಿ, ಪ್ಯಾನ್ ಇಂಡಿಯಾ ಒಂದೇ ಪರವಾನಗಿ ಮತ್ತು ಒಂದೇ ರಿಟರ್ನ್ ಸಲ್ಲಿಕೆ.
