ಕೇರಳ: ಇಂದಿನಿಂದ ಶಬರಿಮಲೆ ಅಯ್ಯಪ್ಪ ದೇಗುಲದ ವಾರ್ಷಿಕ ಯಾತ್ರೆ ಆರಂಭವಾಗಿದೆ. ಮಧ್ಯರಾತ್ರಿ 3 ಗಂಟೆಗೆ ದೇಗುಲದ ಬಾಗಿಲು ತೆರೆದಿದ್ದರಿಂದ ಸಾವಿರಾರು ಭಕ್ತರು ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಈ ಅವಧಿಯಲ್ಲಿ ಭಕ್ತರು ತೀರ್ಥಸ್ನಾನ ಮಾಡುವುದರಿಂದ ಸೋಂಕಿನ ಅಪಾಯ ಹೆಚ್ಚಿರುತ್ತದೆ. ಬಿಸಿ ವಾತಾವರಣದಲ್ಲಿ ನಿಂತುಕೊಳ್ಳುವ ನೈಸರ್ಗಿಕ ನೀರುಗಳಲ್ಲಿ ಮೆದುಳು ತಿನ್ನುವ ಅಮೀಬಾ ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕೇರಳ ಆರೋಗ್ಯ ಇಲಾಖೆ ಭಕ್ತರಿಗೆ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಅದನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದೆ. ತೀರ್ಥಸ್ನಾನ ಮಾಡುವಾಗ ಮೂಗಿಗೆ ನೀರು ಹೋಗದಂತೆ ಎಚ್ಚರ ವಹಿಸಿ, ಕುಡಿಯಲು ಬಿಸಿ ನೀರನ್ನು ಬಳಸಲು ಹಾಗೂ ಆಗಾಗ ಕೈಗಳನ್ನು ನೀರಿನಿಂದ ಸ್ವಚ್ಛಗೊಳಿಸಿಕೊಳ್ಳುವಂತೆ ಸೂಚಿಸಿದೆ. ತಲೆನೋವು, ಜ್ವರ, ವಾಂತಿ, ಕುತ್ತಿಗೆ ಬಿಗಿಯಾಗುವುದು, ಗೊಂದಲ ಮತ್ತು ತಲೆ ಸುತ್ತು ಸೋಂಕಿನ ಲಕ್ಷಣವಾಗಿದ್ದು, ಬೆಟ್ಟ ಹತ್ತುವಾಗ ಆಗಾಗ ವಿಶ್ರಾಂತಿ ಪಡೆದು ಹಾಗೂ ಶೌಚಾಲಯವನ್ನು ಕಡ್ಡಾಯವಾಗಿ ಬಳಸುವಂತೆ ಸೂಚನೆ ನೀಡಲಾಗಿದೆ.
