ಬೆಂಗಳೂರು: ಮರಗಳಲ್ಲಿ ಮಕ್ಕಳನ್ನು ಕಂಡು ಮರೆಯಾದ ಮಹಾ ತಾಯಿ ತಿಮ್ಮಕ್ಕ. 114 ವರ್ಷ ತುಂಬು ಜೀವನ ನಡೆಸಿ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ತಿಮ್ಮಕ್ಕ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾದರು. ತುಮಕೂರಿನ ಗುಬ್ಬಿ ತಾಲ್ಲೂಕಿನಲ್ಲಿ 30 ಜೂನ್ 1911 ರಂದು ಚಿಕ್ಕರಂಗಯ್ಯ ಹಾಗೂ ವಿಜಯಮ್ಮ ದಂಪತಿಗೆ ಜನಿಸಿದ ತಿಮ್ಮಕ್ಕ ನಂತರ ದನಗಾಯಿ ಚಿಕ್ಕಯ್ಯ ಅವರನ್ನು ಮದುವೆ ಆಗಿದ್ದರು. ಆದರೆ ದುರಾದೃಷ್ಟವಶಾತ್ ಅವರಿಗೆ ಮಕ್ಕಳಾಗಿರಲಿಲ್ಲ. ಆದರೆ, ಅವರು ಸಸಿಗಳನ್ನು ನೆಟ್ಟು ಅದನ್ನೇ ತನ್ನ ಮಕ್ಕಳೆಂದು ಭಾವಿಸಿ ದಂಪತಿಗಳು ಪೋಷಿಸುತ್ತಿದ್ದರು. ಈವರೆಗೆ 8000ಕ್ಕೂ ಅಧಿಕ ಮರಗಳನ್ನು ನೆಟ್ಟು ಆರೈಕೆ ಮಾಡಿದ ತಿಮ್ಮಕ್ಕನಿಗೆ ರಾಷ್ಟ್ರೀಯ ಪೌರ ಪ್ರಶಸ್ತಿ, ವೀರಚಕ್ರ ಪ್ರಶಸ್ತಿ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ವನಮಾತೆ ಪ್ರಶಸ್ತಿ, ಮಹಿಳಾ ರತ್ನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಪದ್ಮಶ್ರೀ ಹಾಗೂ ಅನೇಕ ಪ್ರಶಸ್ತಿಗಳು ಲಭಿಸಿವೆ. 2020ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಕೂಡ ಲಭಿಸಿದೆ. ಅವರು ನೆಟ್ಟ ಮರಗಳು ಕೊಟ್ಟ ತಂಪು ನೆರಳು, ಹರಡಿಸಿದ ಹಸಿರು ಇವೆಲ್ಲವೂ ಅವರು ಮಾಡಿರುವ ಅಸಾಮಾನ್ಯ ಸೇವೆಯನ್ನು ಸ್ಮರಿಸುವಂತೆ ಮಾಡುತ್ತವೆ.
