ಚಿಕ್ಕಮಗಳೂರು: ರುಚಿ-ಶುಚಿ ಇಲ್ಲದ ಊಟ ಅರ್ಧಂಬರ್ಧ ಬೆಂದ ಚಪಾತಿ, ಅನ್ನ ತಿಂದು ಅಜೀರ್ಣವಾಗುತ್ತಿದೆ. ಮುದ್ದೆ ಆದರು ತಿನ್ನೋಣ ಎಂದರೆ ಖಾಲಿ ಎಂದು ವಾಪಸ್ ಕಳುಹಿಸುತ್ತಾರೆ. ಒಳ್ಳೆ ಊಟ ಕೇಳಿದರೆ ಓದುವುದಕ್ಕೆ ಬಂದಿದ್ದೋ ಇಲ್ಲಾ ತಿನ್ನೋದಕ್ಕೋ ಅಂತ ಹಂಗಿಸಿ ಮಾತನಾಡುತ್ತಾರೆ. ವಾರ ಪೂರ್ತಿ ಪ್ರತಿ ರಾತ್ರಿ ಒಂದೇ ರೀತಿಯ ಸಾರು ಮಾಡುತ್ತಾರೆ. ಅದನ್ನು ತಿನ್ನಲಿಕ್ಕೂ ಆಗದೇ ಒದ್ದಾಡುವ ಪರಿಸ್ಥಿತಿ ನಮಗೆ ಎದುರಾಗಿದೆ ಎಂಬುದು ಚಿಕ್ಕಮಗಳೂರು ನಗರದ ಬಿ.ಸಿ.ಎಂ. ಹಾಸ್ಟೆಲ್ನಲ್ಲಿರುವ ಇಂಜಿನಿಯರಿಂಗ್ ವಿದ್ಯಾರ್ಥಿನಿಯರ ಅಳಲು. ಹೆದರಿಸಿ, ಬೆದರಿಸಿ, ಬೈದು ಬಲವಂತವಾಗಿ ಒಳ್ಳೆಯ ಫೀಡ್ಬ್ಯಾಕ್ ಬರೆಸಿಕೊಳ್ಳುತ್ತಿದ್ದು, ಊಟ, ತಿಂಡಿ, ಮೂಲ ಸೌಕರ್ಯಗಳ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರೂ ಸುಳ್ಳು ಭರವಸೆ ನೀಡುತ್ತಾ ಯಾವುದೇ ರೀತಿಯ ಕ್ರಮವನ್ನು ಇದುವರೆಗೂ ಜರುಗಿಸಿಲ್ಲ. ಹೇಗಾದರೂ ವಾರ್ಡನ್ ದಬ್ಬಾಳಿಕೆಯಿಂದ ಮುಕ್ತಿ ನೀಡಿ ಅವರ ದರ್ಪದ ಮಾತಿಗೆ ಕಡಿವಾಣ ಹಾಕಿ ವಿದ್ಯಾರ್ಥಿನಿಯರು ತಮ್ಮ ಹೆಸರು, ಮೊಬೈಲ್ ನಂಬರ್ ಸಹಿತವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
