ಶೃಂಗೇರಿ : ಪ್ರತೀ ಬಾರಿ ಚುನಾವಣೆಗೆ ಮತ ಕೇಳಲು ಬರುವವರು ನೀಡುವ ಹಸಿ ಸುಳ್ಳಿನ ಭರವಸೆ ಎಂದರೆ, ಅದು ನಮ್ಮನ್ನು ಗೆಲ್ಲಿಸಿದರೆ ರಸ್ತೆ ಕಾಮಗಾರಿ ಹಾಗೂ ಸೇತುವೆ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಿ ಸಂಪೂರ್ಣಗೊಳಿಸುತ್ತೇವೆ ಎಂಬುದು ಆದರೆ ಅವರ ಚುನಾವಣೆ ಅವಧಿ ಮುಗಿದರು ಒಂದೇ ಒಂದು ಗುಂಡಿ ಕೂಡ ಮುಚ್ಚಿರುವುದಿಲ್ಲ ಎಂಬುದು ಗ್ರಾಮಸ್ಥರ ಗೋಳು. ಈ ಹದಗೆಟ್ಟ ಹೆದ್ದಾರಿ ರಸ್ತೆಯಲ್ಲಿ ಚಲಿಸುವ ಕಾರಣ ವರ್ಷಕ್ಕೆ3ಬಾರಿ ನಮ್ಮ ವಾಹನ ರಿಪೇರಿ ಮಾಡಿಸುವ ದುಸ್ಥಿತಿ ಎದುರಾಗಿದೆ ಎನ್ನುತ್ತಾರೆ ವಾಹನ ಚಾಲಕರು. ಹತ್ತಿರದಲ್ಲಿ ಶಾಲೆ ಇದ್ದರೂ ಪ್ರತಿ ನಿತ್ಯ ಓಡಾಡಲು ಹರಸಾಹಸ ಪಡುವ ಮಕ್ಕಳನ್ನು ವಸತಿ ಶಾಲೆಗಳಿಗೆ ಸೇರಿಸಿ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಶೃಂಗೇರಿ ಕ್ಷೇತ್ರಕ್ಕೆ ಪ್ರತಿದಿನ ನೂರಾರು ಭಕ್ತರು ಬರುವುದರಿಂದ ಕಿರಿದಾದ ರಸ್ತೆ, ದೊಡ್ಡ ಗುಂಡಿಗಳು, ಕಾಡು ಮರಗಳ ಬೀಳು, ಗಾಳಿ ಮಳೆಯಿಂದ ರಸ್ತೆಗೆ ಉರುಳುವ ಮರಗಳು ಹೀಗೆ ಅನೇಕ ಸಮಸ್ಯೆಗಳ ನಡುವೆ ಭಕ್ತರು ಅತೀ ಜಾಗರೂಕತೆಯಿಂದ ಕ್ಷೇತ್ರಕ್ಕೆ ಆಗಮಿಸಬೇಕದ ಪರಿಸ್ಥಿತಿ ಎದುರಾಗಿದೆ. ಸ್ವಲ್ಪ ಯಾಮಾರಿದರೂ ಯಮರಾಜ ಕಾದುಕುಳಿತಿರುವಂತೆ ವಾಹನ ಚಾಲಕರಿಗೆ ಭಾಸವಾಗುತ್ತದೆ. ನಿತ್ಯ ಓಡಾಡುವವರಿಗೆ ಲೈಫ್ ಲೈನ್ ರಸ್ತೆ ಬಹಳ ಅಗತ್ಯವಾಗಿದೆ. ತುರ್ತಾಗಿ ಆಸ್ಪತ್ರೆಗೆ ತೆರಳುವ ಸಂದರ್ಭ ಬಂದರೆ ದೇವರೇ ಕಾಪಾಡಬೇಕಾದ ಪರಿಸ್ಥಿತಿ ಇದ್ದು ಎಷ್ಟೋ ಬಾರಿ ಇದಕ್ಕೆಲ್ಲ ಪರಿಹಾರ ಕೋರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಇವೆಲ್ಲ ತಿಳಿದ ಅಧಿಕಾರಿಗಳು ಕುರುಡರಂತೆ ನಟಿಸುತ್ತಿದ್ದಾರೆ.
