ತುಳಸಿ: ತುಳಸಿಯು ಒಂದು ಅತ್ಯಂತ ಪವಿತ್ರ ಮತ್ತು ಔಷಧೀಯ ಸಸ್ಯವಾಗಿದೆ. ಇದನ್ನು ಆಯುರ್ವೇದದಲ್ಲಿ “ಔಷಧಿಗಳ ರಾಣಿ” ಎಂದು ಕರೆಯಲಾಗುತ್ತದೆ. ತುಳಸಿಯು ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಪ್ರಯೋಜನಕಾರಿಯಾಗಿದೆ. ತುಳಸಿಯಿಂದಾಗುವ ಆರೋಗ್ಯ ಪ್ರಯೋಜನಗಳೆಂದರೆ ದೇಹದ ರಕ್ತ ಶುದ್ಧಗೊಳಿಸಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದನ್ನು ಕಷಾಯ ಅಥವಾ ಚಹಾಕ್ಕೆ ಬಳಸಿ ಕುಡಿಯುವುದರಿಂದ ಶೀತ, ಕೆಮ್ಮು, ಜ್ವರ, ಕಫ ಇತ್ಯಾದಿಗೆ ಪರಿಹಾರ ಸಿಗುತ್ತದೆ. ಶ್ವಾಸಕೋಶಕ್ಕೆ ಸಂಬಂಧಿಸಿದ ಅಸ್ತಮ ಅಥವಾ ಬ್ರಾಂಕೈಟಿಸ್ನಂತಹ ತೊಂದರೆಗಳಿಗೆ ಈ ತುಳಸಿ ಸಹಾಯಕವಾಗಿದೆ. ಇದು ರಕ್ತದ ಸಕ್ಕರೆ ಮಟ್ಟ, ರಕ್ತದ ಒತ್ತಡ ಹಾಗೂ ಕೊಲೆಸ್ಟ್ರಾಲ್ ಸಮತೋಲನದಲ್ಲಿರಿಸಲು ಸಹಕರಿಸುತ್ತದೆ. ಇದರ ಎಲೆಗಳನ್ನು ನೀರಿನಲ್ಲಿ ಕುದಿಸಿ ಒಂದರಿಂದ ಎರಡು ಬಾರಿ ಕುಡಿಯಬಹುದು ಅಥವಾ ಹೊಸ ಎಲೆಗಳನ್ನು ಜಜ್ಜಿ ಅದರ ರಸವನ್ನು ಸೇವಿಸಬಹುದು. ಪ್ರತಿದಿನ ಬೆಳಿಗ್ಗೆ 3-5 ಎಲೆ ಸೇವಿಸುವುದರಿಂದ ಶ್ವಾಸಕೋಶ ಮತ್ತು ರೋಗನಿರೋಧಕ ಶಕ್ತಿ ಬಲವಾಗುತ್ತದೆ. ಇದರಲ್ಲಿ ವಿಟಮಿನ್ ಸಿ, ಜಿಂಕ್ ಮತ್ತು ಆಂಟಿ-ಆಕ್ಸಿಡೆಂಟ್ಸ್ ಅಧಿಕವಾಗಿದ್ದು, ದೇಹವನ್ನು ವೈರಸ್, ಬ್ಯಾಕ್ಟೀರಿಯಾ ಮತ್ತು ಫಂಗಲ್ ಸೋಂಕುಗಳಿಂದ ರಕ್ಷಿಸುತ್ತದೆ. ನೀರನ್ನು ಕುದಿಸಿ ಅದರಲ್ಲಿ ತುಳಸಿ ಎಲೆಗಳು, ಶುಂಠಿ ಮತ್ತು ಮೆಣಸು ಹಾಕಿ 5 ನಿಮಿಷ ಕುದಿಸಿ ನಂತರ ಬೆಲ್ಲ ಅಥವಾ ತುಪ್ಪ ಸೇರಿಸಿ ಕುಡಿದರೆ ಶೀತ, ಕೆಮ್ಮು, ಗಂಟಲಿನ ನೋವು ಮತ್ತು ದೇಹದ ಬಲವರ್ಧನೆಗೆ ತುಂಬಾ ಉತ್ತಮ.
