
ಶೃಂಗೇರಿ: ಜಗತ್ಪ್ರಸಿದ್ಧವಾದ ಶೃಂಗೇರಿ ಶರನ್ನವರಾತ್ರಿಯು ಬರುವ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 03ರ ವರೆಗೆ ವಿಜೃಂಭಣೆಯಿಂದ ನಡೆಲಿದ್ದು. ಈ ಸಂದರ್ಭದಲ್ಲಿ ತಾಯಿ ಶಾರದೆಗೆ ಜಗತ್ಪ್ರಸೂತಿ ಅಲಂಕಾರ, ಹಂಸವಾಹನಾಲಂಕಾರ, ವೃಷಭವಾಹನಾಲಂಕಾರ, ಮಯೂರ ವಾಹನಾಲಂಕಾರ, ಗರುಡವಾಹನಾಲಂಕಾರ, ಇಂದ್ರಾಣಿ ಅಲಂಕಾರ, ಮೋಹನಿ ಅಲಂಕಾರ, ವೀಣಾಶಾರದಾಲಂಕಾರ, ರಾಜರಾಜೇಶ್ವರಿ ಅಲಂಕಾರ, ಸಿಂಹವಾಹನಾಲಂಕಾರ, ಗಜಲಕ್ಷ್ಮೀ ಅಲಂಕಾರ ಹಾಗೂ ಶ್ರೀ ಶಾರದಾಂಬಾ ಮಹಾರಥೋತ್ಸವ, ಶ್ರೀ ಜಗದ್ಗುರು ಮಹಾಸ್ವಾಮಿಗಳವರ ಅಡ್ಡಪಲ್ಲಕ್ಕಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಈ ಸಂದರ್ಭದಲ್ಲಿ ಪ್ರತಿಪತ್ತಿನಿಂದ ನಮವಿಯವರೆಗೂ ಪ್ರತಿನಿತ್ಯ ವೇದ – ಪುರಾಣ – ಇತಿಹಾಸ – ಪ್ರಸ್ಥಾನತ್ರಯಭಾಷ್ಯ – ಪಾರಾಯಣೆಗಳು, ಉಭಯ ಶ್ರೀಗಳವರಿಂದ ಶ್ರೀ ಶಾರದಾ ಅಮ್ಮನವರಿಗೆ ವಿಶೇಷ ಪೂಜೆ, ಸಂಜೆ ಶಾರದಾಂಬಾ ಮಹಾದೀಪೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀ ಶಾರದಾ ಅಮ್ಮನವರಿಗೆ ಡೋಲೋತ್ಸವ(ಉಯ್ಯಾಲೆ ಸೇವೆ), ಅಮ್ಮನವರ ಬೀದಿ ಉತ್ಸವ, ರಾತ್ರಿ ಶ್ರೀ ಶಾರದಾ ಅಮ್ಮನವರಿಗೆ ಬಂಗಾರದ ದಿಂಡೀ ಉತ್ಸವ, ಜಗದ್ಗುರು ಶ್ರೀ ಸನ್ನಿಧಾನಂಗಳವರಿಗೆ ದರ್ಬಾರು, ಮಹಾಮಂಗಳಾರತಿ, ಅಷ್ಟಾವಧಾನ ಸೇವೆ ನಡೆಯುತ್ತದೆ.