
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ ಮೀರಿ ಹೋಗಿದೆ. ಚಿಕ್ಕಮಗಳೂರು ತಾಲೂಕಿನ ಐದಳ್ಳಿ ಗ್ರಾಮದಲ್ಲಿ ಒಂಟಿ ಆನೆಯೊಂದು ಪದೇ ಪದೇ ಉಪಟಳ ನೀಡುತ್ತಿದ್ದು ಫಸಲಿಗೆ ಬಂದ ಅಡಿಕೆ, ಕಾಫಿ, ತೆಂಗಿನ ಮರ ಬಾಳೆ ಗಿಡಗಳನ್ನು ಮುರಿದು ಹಾಕುತ್ತಿದೆ.
ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಹಲವು ತಿಂಗಳುಗಳಿಂದ ಓಡಾಟ ನಡೆಸುತ್ತಿರುವ ಈ ಆನೆಯ ಉಪಟಳಕ್ಕೆ ಜನ ಬೇಸತ್ತು ಹೋಗಿದ್ದಾರೆ. ಮಲೆನಾಡು ಭಾಗದ ಗದ್ದೆಗಳಲ್ಲಿ ಭತ್ತದ ನಾಟಿ ಕಾರ್ಯವು ಆರಂಭಗೊಂಡಿದ್ದು, ಈ ರೀತಿ ಆನೆಗಳು ಉಪಟಳ ನೀಡುತ್ತಿರುವುದರಿಂದ ಕಾರ್ಮಿಕರು ಕೃಷಿ ಚಟುವಟಿಕೆಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.
ಆಲ್ದೂರು ಅರಣ್ಯ ವ್ಯಾಪ್ತಿಯಲ್ಲಿನ ಹಲವು ಗ್ರಾಮಗಳಲ್ಲಿ ಆನೆಗಳು ಬೆಳೆ ಹಾನಿ ಮಾಡುತ್ತಿದೆ, ಈ ಆನೆ ಇತ್ತೀಚಿಗೆ ಐದಳ್ಳಿ ಗ್ರಾಮದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ದಿನ ಒಬ್ಬೊಬ್ಬರ ಮನೆಯ ತೋಟಕ್ಕೆ ಅತಿಥಿಯಾಗಿ ಬರುತ್ತಿದೆ. ನೆನ್ನೆ ರಾತ್ರಿ ಐಬಿ ಲೋಕೇಶ್ ಅವರ ತೋಟದಲ್ಲಿ ಹಾಗೂ ಅರುಣ್ ಕುಮಾರ್ ಮಂಜುನಾಥ್ ಮುಂತಾದವರ ತೋಟದಲ್ಲಿ ತುಂಬಾ ಬೆಳೆ ಹಾನಿ ಆಗಿದೆ. ಇಂದು ಬೆಳೆ ಹಾನಿ ಆಗುತ್ತಿದೆ ಮುಂದೆ ಪ್ರಾಣ ಹಾನಿ ಆಗುವ ಸಂಭವ ಬರಬಹುದು ಇದಕ್ಕೆ ಆಲ್ದೂರು ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಐದಳ್ಳಿ ಗ್ರಾಮದವರು ವಿನಂತಿಸಿಕೊಂಡಿದ್ದಾರೆ.