
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ಬೋನಿನಲ್ಲಿ ಸೆರೆಯಾದ ಸಿರತೆ ಹತ್ತಿರದಿಂದ ನೋಡಲು ಅರಣ್ಯ ಇಲಾಖೆ ಸಿಬ್ಬಂದಿ ಬೋನಿನ ಬಾಗಿಲು ಅರ್ಧ ತೆಗೆದು ಚಿರತೆಯನ್ನು ಕೆರಳಿಸುರುವ ಘಟನೆ ನಡೆದಿದೆ. ಅರಣ್ಯ ಇಲಾಖೆಯ ಅಧಿಕಾರಿಯ ಈ ನಡೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಾರಾಯಣಪುರ ಗ್ರಾಮದಲ್ಲಿ ಹಲವು ದಿನಗಳಿಂದ ಚಿರತೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ -ಭಯ ಹುಟ್ಟಿಸಿತ್ತು. ಸ್ಥಳೀಯರು ಹೊಲ, ಗದ್ದೆ, ತೋಟಗಳಲ್ಲಿ ಹೋಗಲು ಹಿಂದೇಟು ಹಾಕುತ್ತಿದ್ದರು. ಮಕ್ಕಳು ಕೂಡ ಶಾಲೆಗೆ ತೆರಳಲು ಭಯಪಡುತ್ತಿದ್ದರು. ಹಾಗಾಗಿ ಅರಣ್ಯ ಇಲಾಖೆಯವರು ನಾರಾಯಣಪುರ ಗ್ರಾಮದ ಶಿವಯ್ಯ ಎಂಬುವವರ ಮನೆ ಬಳಿ ಬೋನಿಟ್ಟಿದ್ದರು. ಕಳೆದ ರಾತ್ರಿ ೧೨ಗಂಟೆ ಸುಮಾರಿಗೆ ಚಿರತೆ ಬೋನಿಗೆ ಬಿದ್ದಿತ್ತು. ಆದರೆ ಇಂದು ಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಯಾಗಿದ್ದ ಬೋನಿನ ಬಾಗಿಲನ್ನು ಅರ್ಧ ತೆಗೆದು ಹುಚ್ಚಾಟ ಮೆರೆದಿದ್ದಾರೆ.
ಚಿರತೆ ಭಯವಾಗಿ ದಾಳಿಗೆ ಯತ್ನಿಸಿದಾಗ ತಕ್ಷಣ ಬಾಗಿಲು ಹಾಕಿದ್ದಾರೆ. ಅಧಿಕಾರಿಗಳ ಈ ಹುಚ್ಚಾಟದ ವೀಡಿಯೋ ಸ್ಥಳೀಯರ ಮೊಬೈಲನಲ್ಲಿ ಸೆರೆಯಾಗಿದೆ. ಅಪಾಯಕಾರಿ ಪ್ರಾಣಿಯ ಜೊತೆ ಈ ರೀತಿ ಹುಚ್ಚಾಟ ಆಡುವ ಅಧಿಕಾರಿಗಳ ವಿರುದ್ಧ ಸ್ಥಳೀಯರು ಕೂಡ ಅಸಮಧಾನ ಹೊರಹಾಕಿದ್ದಾರೆ. ಈ ಘಟನೆಯಿಂದ ಅರಣ್ಯ ಇಲಾಖೆ ಸಿಬ್ಬಂದಿಗಳ ಕಾರ್ಯ ನಿರ್ವಹಣೆಯ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ