
ಪ್ರಕೃತಿಯ ಅಸಂಖ್ಯಾತ ವಿಸ್ಮಯಗಳಲ್ಲಿ ಒಂದಾಗಿ ಮಂಗಟ್ಟೆ ಅಥವಾ ಹಾರ್ನ್ ಬಿಲ್ ಹಕ್ಕಿಗಳ ಬದುಕು ನಿಜಕ್ಕೂ ವಿಶಿಷ್ಟವಾಗಿದೆ. ಕೇಸರಿ-ಹಳದಿ ಬಣ್ಣದ ಉದ್ದವಾದ ಕೊಕ್ಕು, ಅದರ ಮೇಲೆ ಇರುವ ಗುಬ್ಬಚ್ಚೆಯಾಕಾರದ ರಚನೆ, ಆಕರ್ಷಕ ಮೈಬಣ್ಣ ಹಾಗೂ ಮಕ್ಕಳ ಅಳುವಂತಿರುವ ಜೋರಾದ ಧ್ವನಿಯು ಅವುಗಳ ವೈಶಿಷ್ಟ್ಯ. ಸಾಮಾನ್ಯವಾಗಿ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಗುಂಪುಗಳಾಗಿ ವಾಸಿಸುವ ಈ ಹಕ್ಕಿಗಳ ಹಲವು ಪ್ರಭೇದಗಳಿದ್ದು, ವಿಶೇಷವೆಂದರೆ ಗಂಡು ಮಂಗಟ್ಟೆ ಜೀವನಪೂರ್ತಿ ಒಂದೇ ಹೆಣ್ಣು ಸಂಗಾತಿಗೆ ನಿಷ್ಠೆಯಿಂದ ಬದುಕುತ್ತದೆ. ಜನವರಿಯಿಂದ ಏಪ್ರಿಲ್ವರೆಗೆ ಸಂತಾನೋತ್ಪತ್ತಿ ನಡೆಸುವ ಇವುಗಳು ಎತ್ತರದ ಮರದ ಪೊಟರೆಯಲ್ಲಿ ಗೂಡು ಕಟ್ಟುತ್ತವೆ. ಹೆಣ್ಣು ಹಕ್ಕಿ ಮೊಟ್ಟೆಗೆ ಕಾವು ಕೊಡಲು ಒಳಗೆ ಪ್ರವೇಶಿಸಿದ ಬಳಿಕ, ಗಂಡು ಮತ್ತು ಹೆಣ್ಣು ಸೇರಿ ಪೊಟರೆಯ ಬಾಗಿಲನ್ನು ಆಹಾರ ತರುವಷ್ಟು ಜಾಗ ಬಿಟ್ಟು ಮುಚ್ಚುತ್ತವೆ. ಈ ವೇಳೆ ಸುಮಾರು ಮೂರು ತಿಂಗಳ ಗೃಹಬಂಧನದಲ್ಲಿರುವ ಹೆಣ್ಣು ಮಂಗಟ್ಟೆಗೆ ಗಂಡು ಮಂಗಟ್ಟೆ ನಿರಂತರವಾಗಿ ಆಹಾರ ಒದಗಿಸುತ್ತಾ ಕಷ್ಟ-ಸುಖಗಳಲ್ಲಿ ಜೊತೆಗಿರುತ್ತದೆ. ಮೊಟ್ಟೆ ಒಡೆದು ಮರಿಗಳು ಹಾರಲು ಸಿದ್ಧವಾದಾಗ ಬಾಗಿಲು ತೆರೆಯಲ್ಪಟ್ಟು ಹೆಣ್ಣು ಮಂಗಟ್ಟೆ ಮರಿಗಳೊಂದಿಗೆ ಹೊರಬಂದು ಸಾಮಾನ್ಯ ಜೀವನ ಮುಂದುವರಿಸುತ್ತದೆ. ಆದರೆ ಗಂಡು ಹಕ್ಕಿ ಈ ಅವಧಿಯಲ್ಲಿ ಸಾವನ್ನಪ್ಪಿದರೆ, ಆಹಾರಕ್ಕೆ ಸಂಪೂರ್ಣ ಅವಲಂಬಿತವಾಗಿರುವ ಹೆಣ್ಣು ಮತ್ತು ಮರಿಗಳು ಜೀವಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪ್ರೀತಿ, ನಿಷ್ಠೆ, ಕಾಳಜಿ ಮತ್ತು ತ್ಯಾಗದಿಂದ ಕೂಡಿದ ಈ ಮಂಗಟ್ಟೆಗಳ ದಾಂಪತ್ಯ ಜೀವನವು ಮನುಷ್ಯನಿಗೂ ಮಾದರಿಯಾಗುವಂತದ್ದು.