
ಮೈಸೂರು: ಮೈಸೂರು ನಗರದ ಹಳೆ ಕೆಸರೆಯಲ್ಲಿರುವ ಶೂನ್ಯ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಸುಮಾರು 50 ಟನ್ ತ್ಯಾಜ್ಯ ಹಾಗೂ ಸುಮಾರು 40 ಲಕ್ಷ ರೂ. ಮೌಲ್ಯದ ಯಂತ್ರೋಪಕರಣಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಬೆಳಿಗ್ಗೆ 5 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡು ವೇಗವಾಗಿ ವ್ಯಾಪಿಸಿದ ಪರಿಣಾಮ, ಸ್ಥಳದಲ್ಲಿ ದಟ್ಟ ಹೊಗೆ ಹರಡಿದ್ದು, ಪ್ಲಾಸ್ಟಿಕ್ ತ್ಯಾಜ್ಯ ಸುಟ್ಟ ದುರ್ವಾಸನೆಯು ಸುತ್ತಮುತ್ತಲಿನ ವಾತಾವರಣವನ್ನು ಅಸಹನೀಯವಾಗಿಸಿತು. ತಕ್ಷಣ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಮೂರು ಗಂಟೆಗಳ ಕಠಿಣ ಕಾರ್ಯಾಚರಣೆ ನಂತರ ಬೆಂಕಿಯನ್ನು ನಂದಿಸಲಾಗಿತ್ತು. ಈ ಘಟನೆಯಿಂದ ನಷ್ಟಕ್ಕೊಳಗಾದ ಸಾರ್ವಜನಿಕರು ಮತ್ತು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿ ಘಟಕ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಸ್ಥಳೀಯರ ಮತ್ತು ಪಾಲಿಕೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಘಟಕದಲ್ಲಿ ಅಗ್ನಿ ನಿರೋಧಕ ವ್ಯವಸ್ಥೆಯ ಕೊರತೆಯಿದದ್ದನ್ನು ಸ್ಥಳೀಯರು ಉಲ್ಲೇಖಿಸಿ, ಪರಿಸ್ಥಿತಿಯ ಗಂಭೀರತೆಗೆ ಸರ್ಕಾರ ಸ್ಪಂದಿಸಬೇಕೆಂದು ಆಗ್ರಹಿಸಿದರು. ಈ ನಡುವೆ, ಬೆಂಕಿಗೆ ಕಿಡಿಗೇಡಿಗಳ ಕೈವಾಡವಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಟಗಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಬಗ್ಗೆ ಮಾತನಾಡಿದ ಪಾಲಿಕೆ ಆರೋಗ್ಯಾಧಿಕಾರಿ ಡಾ. ಎನ್.ಪಿ. ವೆಂಕಟೇಶ್, ಬೆಂಕಿಯನ್ನು ಸಂಪೂರ್ಣ ನಂದಿಸಲಾಗಿದೆ ಎಂದು ತಿಳಿಸಿದ್ದಾರೆ.