
ನವದೆಹಲಿ: ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರಿಗೆ ಸಂಬಂಧಿಸಿದ ಹಲವು ಕಂಪನಿಗಳ ಸಾಲ ವಂಚನೆ ಮತ್ತು ಹಣಕಾಸು ಅಕ್ರಮಗಳ ತನಿಖೆ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ED) ಅವರು ಆಗಸ್ಟ್ 5 ರಂದು ದೆಹಲಿಯ ಇಡಿ ಕಚೇರಿಯಲ್ಲಿ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.ಆ ಮೂಲಕ, ₹10,000 ಕೋಟಿಗೂ ಅಧಿಕ ಮೌಲ್ಯದ ಹಣಕಾಸು ವಂಚನೆ ಮತ್ತು ಸಾಲ ಮರುಪಾವತಿ ವ್ಯತ್ಯಯಗಳ ಕುರಿತಂತೆ ಇಡಿ ತನಿಖೆ ಮುಂದುವರಿಸಿದೆ. ಈ ಪ್ರಕರಣದ ಭಾಗವಾಗಿ ಇತ್ತೀಚೆಗಷ್ಟೇ ಮೂರು ದಿನಗಳ ಕಾಲ ಹಲವು ಕಂಪನಿಗಳ ಮೇಲೆ ಶೋಧ ನಡೆಸಲಾಗಿದೆ.
ಯೆಸ್ ಬ್ಯಾಂಕ್ ಅಂಬಾನಿಯ ಕಂಪನಿಗಳಿಗೆ ನೀಡಿದ ಸಾಲಗಳಲ್ಲೂ ಉಲ್ಲಂಘನೆ ನಡೆದಿದ್ದು, ಶೆಲ್ ಕಂಪನಿಗಳಿಗೆ ಹಣ ವರ್ಗಾವಣೆ, ಹಾಗೂ ಹೂಡಿಕೆದಾರರ ಭದ್ರತೆಗೆ ಧಕ್ಕೆಯಾಗುವಂತಹ ಅಕ್ರಮಗಳ ಕುರಿತು ತನಿಖೆ ನಡೆಯುತ್ತಿದೆ.
ಇದಲ್ಲದೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಕೆಲವು ಬ್ಯಾಂಕುಗಳು RCOM ವಿರುದ್ಧ ವಂಚನೆಯ ಆರೋಪದೊಂದಿಗೆ ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಇಡಿಗೆ ದೂರು ಸಲ್ಲಿಸಲು ಮುಂದಾಗಿವೆ. ಕೆನರಾ ಬ್ಯಾಂಕ್ಗೆ ಸಂಬಂಧಿಸಿದ ₹1,050 ಕೋಟಿಗೂ ಅಧಿಕ ಮೊತ್ತದ ಸಾಲ ವಂಚನೆ, ವಿದೇಶಿ ಖಾತೆಗಳು ಹಾಗೂ ಅಡಗಿದ ಆಸ್ತಿಗಳ ಜಾಲವನ್ನು ಉದ್ದೇಶಿತವಾಗಿ ತಿರುಚಿರುವ ಶಂಕೆ ಇದೆ.