
ಹೊಸನಗರ: ಹೊಸನಗರ ತಾಲೂಕಿನ ಹೂವಿನಕೋಣೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ದುರ್ಘಟನೆಯೊಂದರಲ್ಲಿ ಕಿಡಿಗೇಡಿಗಳು ಶಾಲೆಯ ನೀರಿನ ಟ್ಯಾಂಕ್ಗಳಿಗೆ ಕಳೆನಾಶಕ ಮಿಶ್ರಣ ಮಾಡುವ ಕ್ರೂರ ಕೃತ್ಯ ನಡೆಸಿದ್ದಾರೆ. ಈ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದು, ಬಳಸುತ್ತಿದ್ದ ನೀರಿನ ವಾಸನೆಗೆ ಅನುಮಾನಗೊಂಡ ಶಿಕ್ಷಕರು ನಾಲ್ವರು ಮಕ್ಕಳು ಅಸ್ವಸ್ಥರಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೃಷ್ಟವಶಾತ್ ಅವರ ಆರೋಗ್ಯ ಸ್ಥಿರವಾಗಿದೆ. ತಹಶೀಲ್ದಾರ್ ರಶ್ಮಿ ಹಾಲೇಶ್, ಶಾಸಕರ ಆಪ್ತ ಮಂಜು ಸಣ್ಣಕ್ಕಿ, ತಾಪಂ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಈ ಘಟನೆ ಮಕ್ಕಳ ಸುರಕ್ಷತೆಯ ಮೇಲಿರುವ ನಿರ್ಲಕ್ಷ್ಯಕ್ಕೆ ತೀವ್ರ ಎಚ್ಚರಿಕೆ ನೀಡಿದ್ದು, ಗ್ರಾಮಸ್ಥರು ಮತ್ತು ಪೋಷಕರು ತೀವ್ರ ಖಂಡನೆ ವ್ಯಕ್ತಪಡಿಸಿ, ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.