
ಮಧ್ಯಪ್ರದೇಶ: ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯ ಜವಾಸಿಯಾ ಗ್ರಾಮದಲ್ಲಿ ಹೃದಯವಿದ್ರಾವಕ ಹಾಗೂ ಮನಮಿಡಿಯುವ ಘಟನೆಯೊಂದು ನಡೆದಿದೆ. ಸ್ನೇಹಿತನ ಅಂತ್ಯಕ್ರಿಯೆಯಲ್ಲಿ ನೃತ್ಯ ಮಾಡುವ ವ್ಯಕ್ತಿಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಇದು ಎಷ್ಟೋ ಅಪರೂಪದ ಸ್ನೇಹಿತನಿಗೆ ನೀಡಿದ ಗೌರವ – ಕ್ಯಾನ್ಸರ್ನಿಂದ ಬಳಲುತ್ತಿದ್ದ ಸೋಹಲ್ ಲಾಲ್ ಜೈನ್ 2023ರಿಂದಲೇ ತಮ್ಮ ಅಂತ್ಯಕ್ರಿಯೆ ಹಬ್ಬದಂತಿರಬೇಕೆಂದು ಆಸೆಪಟ್ಟಿದ್ದರು. ಆತ್ಮೀಯ ಗೆಳೆಯ ಅಂಬಾಲಾಲ್ ಪ್ರಜಾಪತಿಗೆ ಪತ್ರ ಬರೆದು, ತಮ್ಮ ಅಂತ್ಯಯಾತ್ರೆಯಲ್ಲಿ ನಗುತ್ತಾ ನೃತ್ಯ ಮಾಡಬೇಕು, ಅಳುವಿನ ಬದಲು ಸಂಭ್ರಮ ಇರಬೇಕು ಎಂಬುದಾಗಿ ತಿಳಿಸಿದ್ದಾರೆ. ಅವರ ಈ ಕೊನೆಯ ಇಚ್ಛೆಯನ್ನು ನೆರವೇರಿಸಲು ಅಂಬಾಲಾಲ್ ಕಣ್ಣೀರನ್ನ ಬಿಗಿ ಹಿಡಿದು ನಗುತ್ತಾ ನೃತ್ಯ ಮಾಡಿದ ದೃಶ್ಯವು ಎಲ್ಲರನ್ನೂ ಭಾವುಕರನ್ನಾಗಿಸುತ್ತದೆ. ಗ್ರಾಮಸ್ಥರು ಇಂಥಾ ಸ್ನೇಹವನ್ನು ಮೆಚ್ಚಿ ಶ್ಲಾಘಿಸಿದರು. ಮೃತರ ಪುತ್ರ ಮುಖೇಶ್ ಜೈನ್ ಕೂಡ ತಂದೆಯ ಕೊನೆಯ ಆಶಯವನ್ನೊಂದು ಈಡೇರಿಸಲಾಗಿದೆ ಎಂದು ತೃಪ್ತಿ ವ್ಯಕ್ತಪಡಿಸಿದರು.