
ಭಾರತ ಮತ್ತು ಅಮೆರಿಕ ನಡುವೆ ನ್ಯಾಯಸಮ್ಮತ, ಸಮತೋಲನಯುತ ಹಾಗೂ ಪರಸ್ಪರ ಪ್ರಯೋಜನಕಾರಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ಮಾತುಕತೆಗಳು ಕಳೆದ ಕೆಲವು ತಿಂಗಳಿಂದ ನಡೆಯುತ್ತಿದ್ದು, ಭಾರತ ಈ ಗುರಿಗೆ ಬದ್ಧವಾಗಿದೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ವ್ಯಾಪಾರ ಸಂಬಂಧಿತ ಹೇಳಿಕೆಯನ್ನು ಗಮನಿಸಿ, ಅದರ ಪರಿಣಾಮಗಳನ್ನು ಪರಿಶೀಲಿಸುತ್ತಿರುವುದಾಗಿ ತಿಳಿಸಿದೆ. ಅಲ್ಲದೇ, ದೇಶದ ರೈತರು, ಉದ್ಯಮಿಗಳು ಹಾಗೂ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ (MSME) ಹಿತಾಸಕ್ತಿಯನ್ನೇ ಅತ್ಯುನ್ನತ ಆದ್ಯತೆ ಎಂದು ಸ್ಪಷ್ಟಪಡಿಸಿದೆ. ಯುಕೆ ಜೊತೆಗೆ ಇತ್ತೀಚೆಗೆ ನಡೆದ ಸಮಗ್ರ ಆರ್ಥಿಕ ಹಾಗೂ ವ್ಯಾಪಾರ ಒಪ್ಪಂದದಂತೆಯೇ, ಯಾವುದೇ ದ್ವಿಪಕ್ಷೀಯ ಒಪ್ಪಂದದಲ್ಲೂ ಭಾರತ ತನ್ನ ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವುದು ಸ್ಪಷ್ಟವಾಗಿದೆ.