
ಮೈಸೂರು: ಮೈಸೂರು ನಗರದಲ್ಲಿ ಮಾದಕ ವಸ್ತು ಜಾಲವನ್ನು ಭೇದಿಸಲು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಏಳು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಇವು ಕಳೆದ ಎರಡು ದಿನಗಳಿಂದ ನಿರಂತರ ಶೋಧ ಕಾರ್ಯಾಚರಣೆ ನಡೆಸಿವೆ. ಇತ್ತೀಚಿನ ದಾಳಿಯಲ್ಲಿ ಆರು ಡ್ರಗ್ಸ್ ಪೆಡ್ಲರ್ಗಳು ಹಾಗೂ ಗಾಂಜಾ ಸೇವನೆ ಮಾಡುತ್ತಿದ್ದ 27 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮುಖ್ಯವಾಗಿ ಪುಲಕೇಶಿ ರಸ್ತೆ, ಮೀನಾ ಬಜಾರ್, ಮಹದೇವಪುರ ರಸ್ತೆಯಂತಹ ಬಡಾವಣೆ ವ್ಯಾಪ್ತಿಯ ಉದ್ಯಾನಗಳಲ್ಲಿ ಗಸ್ತು ನಡೆಸಿ ವ್ಯಸನಿಗಳನ್ನು ಪತ್ತೆ ಹಚ್ಚಲಾಗಿದೆ. 5.7 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ನಗರ ಪೊಲೀಸ್ರ ಜೊತೆಗೆ ಜಿಲ್ಲೆಯ ಪೊಲೀಸರು ಸಹ ಭಾಗವಹಿಸಿ ನಗರ ಹೊರವಲಯದ ಚಾಮುಂಡಿ ಬೆಟ್ಟದ ತಪ್ಪಲಿನ ರಿಂಗ್ ರಸ್ತೆ ಹಾಗೂ ಗ್ಯಾರೇಜ್, ಗೋದಾಮುಗಳಲ್ಲಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ದಾಳಿ ಮುಂದುವರಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರ ತಂಡ, ಮೈಸೂರು ಬನ್ನಿ ಮಂಟಪದ ರಿಂಗ್ ರಸ್ತೆಯ ಬಳಿ ಇರುವ ಗ್ಯಾರೇಜ್ ಮೇಲೆ ದಾಳಿ ನಡೆಸಿ 381.96 ಕೋಟಿ ರೂ ಮೌಲ್ಯದ 187.97 ಕೆ.ಜಿ ಎಂಡಿಎಂಎ ಮಾದಕ ವಸ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಸಂಬಂಧ ಫಿರೋಜ್ ಮೌಲಾ ಶೇಖ್, ಶೇಖ್ ಆದಿಲ್, ಸೈಯದ್ ಮೆಹಫೂಜ್ ಅಲಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಸೈಯದ್ ರಸಾಯನ ಶಾಸ್ತ್ರದಲ್ಲಿ ಡಿಪ್ಲೊಮಾ ಹೊಂದಿದ್ದು, ದ್ರವ ಮಾದಕವನ್ನು ಪುಡಿಮಾಡುವ ಉದ್ದೇಶ ಹೊಂದಿದ್ದ. ಗ್ಯಾರೇಜ್ ಒಳಗೆ ಯಾರೂ ಚಲನವಲನವಿಲ್ಲದಂತೆ ಇಟ್ಟಿದ್ದು, ಟೀ ಅಂಗಡಿಯೊಂದಕ್ಕೆ ಮಾತ್ರ ತಂಡದ ಸದಸ್ಯರು ಹೋಗುತ್ತಿದ್ದರೆ, ಸ್ಥಳೀಯರಿಗೆ ಶೆಡ್ ಒಳಗಿರುವವರ ಬಗ್ಗೆ ಮಾಹಿತಿ ಇರಲಿಲ್ಲ. ತನಿಖೆಯಲ್ಲಿ ಸಲೀಂ ಲಂಗಡ ಎಂಬುವವನನ್ನು ಮುಂಬಯಿಯಲ್ಲಿ ಜುಲೈ 25ರಂದು ಬಂಧಿಸಿ, ಮಾದಕ ವಸ್ತುಗಳು ಮೈಸೂರಿನಿಂದ ಸಾಗಿಸುತ್ತಿರುವುದು ಪತ್ತೆಯಾಗಿದ್ದು, ನಂತರ ವಿಶೇಷ ತಂಡವನ್ನು ಮೈಸೂರಿಗೆ ಕಳುಹಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಜೊತೆಗೆ ಗ್ಯಾರೇಜ್ ಜಾಗವನ್ನು 20 ಸಾವಿರಕ್ಕೆ ಬಾಡಿಗೆಗೆ ಪಡೆದು 2 ಲಕ್ಷಕ್ಕೆ ಆರೋಪಿಗಳಿಗೆ ನೀಡಿದ ಅಜ್ಮಲ್ನನ್ನೂ ಬಂಧಿಸಲಾಗಿದೆ.