
ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾನವೀಯತೆ ಮೆರೆಯುವ ಅಪೂರ್ವ ಘಟನೆ ಸಂಭವಿಸಿದೆ. ಹೊಸಕೋಟೆ ತಾಲೂಕಿನ ಕಂಬಳಿಪುರದ ಕಾಟೇರಮ್ಮ ದೇವಸ್ಥಾನದಲ್ಲಿ ರಾಮು ಎಂಬುವವರು ತಮ್ಮ ಮಗನ ಮದುವೆಯನ್ನು ಯಾವುದೇ ಆಡಿಯಂಬರವಿಲ್ಲದೇ ಸರಳವಾಗಿ ನಡೆಸಿ, ಅದೇ ವೆಚ್ಚದಲ್ಲಿ ಬಡ ಮತ್ತು ಮಧ್ಯಮ ವರ್ಗದ 11 ನವ ಜೋಡಿಗಳಿಗೂ ಸಾಮೂಹಿಕವಾಗಿ ವಿವಾಹ ಮಾಡಿಸುವ ಮೂಲಕ ಸಮಾಜಕ್ಕೆ ಮಾದರಿಯಾದರು. ಮದುವೆ ಎಂದರೆ ಸಾಮಾನ್ಯವಾಗಿ ದೊಡ್ಡ ವೆಚ್ಚ, ಸಡಗರ, ಗೌರವದ ಪ್ರಶ್ನೆ ಎಂದು ಅನೇಕರೂ ಸಾಲ ಮಾಡಿಕೊಂಡು ದುಂಡು ವೆಚ್ಚದಲ್ಲಿ ವಿವಾಹ ಮಾಡುತ್ತಿದ್ದರು. ಆದರೆ ರಾಮು ಅವರು ಲಕ್ಷ ಲಕ್ಷ ಹಣ ಇದ್ದರೂ ಅದನ್ನು ಒಬ್ಬ ಮಗನ ಮದುವೆಗೆ ಮಾತ್ರ ಬಳಸದೆ, ದೇವಸ್ಥಾನ ಆವರಣದಲ್ಲಿ ವೇದಿಕೆ ನಿರ್ಮಿಸಿ, ಪಂಡಿತರೊಂದಿಗೆ 11 ಜೋಡಿಗಳಿಗೆ ವಿವಾಹ ಮಾಡಿಸಿ ಉದಾತ್ತತೆ ಮೆರೆದಿದ್ದಾರೆ. ಪ್ರತಿಯೊಬ್ಬ ವಧುವಿಗೆ ಸೀರೆ, ವರರಿಗೆ ಶರ್ಟ್, ಪಂಚೆ, ಪೇಟ, ಚಿನ್ನದ ತಾಳಿ ಮತ್ತು 10,000 ರೂ ನಗದು ಉಡುಗೊರೆ ನೀಡುವ ಮೂಲಕ ಅವರು ಜವಾಬ್ದಾರಿ ಮೆರೆಯಲೂ ಮರೆತಿಲ್ಲ. ತಮ್ಮ ಕುಟುಂಬದೊಂದಿಗೆ ಮತ್ತು ದೇವಾಲಯದ ಭಕ್ತರ ಸಮ್ಮುಖದಲ್ಲಿ ಈ ಮದುವೆ ನೆರವೇರಿಸಿ, ಅತಿಯಾದ ಖರ್ಚು ಮಾಡಿ ಮದುವೆ ಮಾಡುವುದು ಅಗತ್ಯವಲ್ಲ ಎಂಬ ಸಂದೇಶವನ್ನು ಪ್ರೇರಣಾದಾಯಕ ರೀತಿಯಲ್ಲಿ ನೀಡಿದ್ದಾರೆ. ದೇವಸ್ಥಾನದಲ್ಲಿ ವಧು-ವರರ ಕುಟುಂಬಗಳಿಗೆ ಊಟ ವ್ಯವಸ್ಥೆ ಕೂಡ ಮಾಡಿ, ಸರಳ ವಿವಾಹದ ಮಹತ್ವವನ್ನು ಜನರಲ್ಲಿ ಜಾಗೃತಿ ಮೂಡಿಸಲು ಅವರು ಕೈಗೊಂಡ ಈ ಕ್ರಮ ಸಾಮಾಜಿಕ ಗೌರವಕ್ಕೆ ಪಾತ್ರವಾಗಿದೆ.