
ಬೆಂಗಳೂರು: ಬೆಂಗಳೂರು ನಗರದ ಥಣಿಸಂದ್ರದಲ್ಲಿ ವಂದೇ ಭಾರತ್ ಸ್ಲೀಪರ್ ಕೋಚ್ ಡಿಪೊ ನಿರ್ಮಾಣ ಮಾಡಲು ರೈಲ್ವೆ ಇಲಾಖೆ ಮುಂದಾಗಿದ್ದು, ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗಕ್ಕೆ 270 ಕೋಟಿ ರೂ. ವೆಚ್ಚದಲ್ಲಿ ಈ ಡಿಪೊ-ಕಮ್-ವರ್ಕ್ಶಾಪ್ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಈ ಯೋಜನೆಯು 2026ರ ಆರಂಭಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದು ವಂದೇ ಭಾರತ್ ರೈಲುಗಳ ನಿರ್ವಹಣೆ, ದುರಸ್ತಿ ಹಾಗೂ ಪರಿಶೀಲನೆಗೆ ಕೇಂದ್ರಬಿಂದುವಾಗಲಿದೆ. ಐಸಿಎಫ್ ಮತ್ತು ಬಿಇಎಂಎಲ್ ಜಂಟಿಯಾಗಿ 16 ಬೋಗಿಗಳ 10 ಸ್ಲೀಪರ್ ರೈಲುಗಳನ್ನು ಬೆಂಗಳೂರಿನಲ್ಲಿ ನಿರ್ಮಿಸುತ್ತಿದ್ದು, ಡಿಪೊಯಲ್ಲಿ ಅವುಗಳ ಸೇವಾ ಕಾರ್ಯ ನಡೆಯಲಿದೆ. ಈಗಾಗಲೇ ಬೆಂಗಳೂರು ನಗರದಿಂದ 6 ವಂದೇ ಭಾರತ್ ಚೇರ್ ಕಾರ್ ರೈಲುಗಳು ಸಂಚರಿಸುತ್ತಿದ್ದು, ಭವಿಷ್ಯದಲ್ಲಿ ಇವುಗಳನ್ನು ಸ್ಲೀಪರ್ ಕೋಚ್ ಆಗಿ ಪರಿವರ್ತನೆ ಮಾಡುವ ಯೋಜನೆಯಿದೆ. ಇದಲ್ಲದೇ, ದೇವನಹಳ್ಳಿಯಲ್ಲಿ 400 ಎಕರೆ ಪ್ರದೇಶದಲ್ಲಿ ಮತ್ತೊಂದು ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಾಣ ಪ್ರಾರಂಭವಾಗಿದ್ದು, ಇದು ವೈಟ್ಫೀಲ್ಡ್ನಲ್ಲಿ ನಿರ್ಮಾಣ ಸಾಧ್ಯವಾಗದ ಹಿನ್ನೆಲೆಯಲ್ಲಿ ಆಯ್ಕೆ ಮಾಡಲಾಗಿದೆ. ನೆಲಮಂಗಲದಲ್ಲೂ ಹೊಸ ಟರ್ಮಿನಲ್ ನಿರ್ಮಾಣ ಸಾಧ್ಯತೆಯ ಅಧ್ಯಯನ ನಡೆಯುತ್ತಿದೆ. ದೇವನಹಳ್ಳಿ ಟರ್ಮಿನಲ್ ಬುಲ್ಲಹಳ್ಳಿ-ಹೊಸೂರು ಮಧ್ಯದ ವೆಂಕಟಗಿರಿ ಕೋಟೆ ಹಾಲ್ಟ್ ಬಳಿ 16 ಪ್ಲಾಟ್ಫಾರ್ಮ್, 20 ಸ್ಟೇಬ್ಲಿಂಗ್ ಹಾಗೂ 10 ಪಿಟ್ ಲೈನ್ಗಳೊಂದಿಗೆ ನಿರ್ಮಾಣಗೊಳ್ಳಲಿದೆ. ಈ ಎಲ್ಲಾ ಯೋಜನೆಗಳಿಗೆ ಪೂರಕವಾಗಿ ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್-4 (ಹೀಲಲಿಗೆ-ರಾಜಾನುಕುಂಟೆ)ಯ 38 ಕಿ.ಮೀ ಮಾರ್ಗವೂ ಥಣಿಸಂದ್ರದ ಮೂಲಕ ಹಾದುಹೋಗಲಿದ್ದು, ಅಲ್ಲಿ ನಿಲ್ದಾಣ ನಿರ್ಮಾಣವೂ ನಡೆಯುತ್ತಿದೆ. ಹಲವು ವರ್ಷಗಳಿಂದ ನಿರ್ಕ್ರಿಯವಾಗಿದ್ದ ಥಣಿಸಂದ್ರ ನಿಲ್ದಾಣವನ್ನು ಪುನರ್ ಆರಂಭಿಸಲು ಸ್ಥಳೀಯರು 2020ರಿಂದ ಹೋರಾಟ ನಡೆಸುತ್ತಿದ್ದಾರೆ. ಈ ನಿಲ್ದಾಣವು ಮಾನ್ಯತಾ ಟೆಕ್ ಪಾರ್ಕ್ ಹಾಗೂ ಹೊರವರ್ತುಲ ರಸ್ತೆ ಪ್ರದೇಶಗಳಿಗೆ ಸಮೀಪವಿರುವುದರಿಂದ ಅಭಿವೃದ್ಧಿಗೊಂಡ ಪ್ರದೇಶದ ಜನರಿಗೆ ಅನುಕೂಲವಾಗಲಿದೆ. ಈಗ ಸಿಗ್ನಲ್ ನಿಯಂತ್ರಣ ಕೊಠಡಿಯ ನಿರ್ಮಾಣ ಪ್ರಾರಂಭವಾಗಿರುವಂತೆ, ಉಪನಗರ ಯೋಜನೆ ಮತ್ತು ಡಿಪೊ ಕಾಮಗಾರಿ ಮೂಲಕ ನಿಲ್ದಾಣ ಪುನರ್ ಅಭಿವೃದ್ಧಿಗೆ ಸಾಧ್ಯತೆ ಮೂಡಿದೆ ಎಂದು ರೈಲ್ವೆ ಹೋರಾಟಗಾರ ಕೆ.ಎನ್. ಕೃಷ್ಣ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.