
ಭಾರತದ ಇಸ್ರೋ ಮತ್ತು ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಮೊದಲ ಭೂ ವೀಕ್ಷಣಾ ಉಪಗ್ರಹವಾದ ನಿಸಾರ್ (NISAR – NASA-ISRO Synthetic Aperture Radar) ಜುಲೈ 30, 2025ರಂದು ಉಡಾವಣೆಯಾಗಲಿದೆ ಎಂದು ಇಸ್ರೋ ಜುಲೈ 27 ರಂದು ಘೋಷಿಸಿದೆ. ಈ ಅತ್ಯಾಧುನಿಕ ಉಪಗ್ರಹವು ಭೂಮಿಯ ಮೇಲ್ಮೈ, ಸಾಗರ, ಮಂಜುಗಡ್ಡೆಗಳು ಮತ್ತು ಕಾಡುಗಳಲ್ಲಿನ ಬದಲಾವಣೆಗಳನ್ನು ನಿಖರವಾಗಿ ಮೇಲ್ವಿಚಾರಣೆ ಮಾಡುವ ಸಾಮರ್ಥ್ಯ ಹೊಂದಿದ್ದು, ಪ್ರತಿ 12 ದಿನಗಳಿಗೊಮ್ಮೆ ಭೂಮಿಯ ಪೂರ್ಣ ಚಿತ್ರಣವನ್ನು ಪಡೆದು, ಹವಾಮಾನ ಬದಲಾವಣೆ, ಭೂಕಂಪ, ಜ್ವಾಲಾಮುಖಿ ಸ್ಫೋಟ, ಭೂಕುಸಿತ ಹಾಗೂ ಹಿಮನದಿ ಕರಗುವಿಕೆಯನ್ನು ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ಸಹಾಯ ಮಾಡಲಿದೆ. ನಿಸಾರ್ ಉಪಗ್ರಹದಿಂದ ದೊರೆಯುವ ಮಾಹಿತಿಯನ್ನು ಕೃಷಿ, ವಿಪತ್ತು ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಯಂತಹ ಹಲವಾರು ಕ್ಷೇತ್ರಗಳಲ್ಲಿ ಉಪಯೋಗಿಸಬಹುದಾಗಿದೆ. ಉಡಾವಣೆಯ ನಂತರ ಈ ಉಪಗ್ರಹವನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆಗೆ ತರುವದಕ್ಕೆ ಸುಮಾರು 90 ದಿನಗಳ ಕಾಲ ಸೆಟಪ್ ಕಾರ್ಯ ನಡೆಯಲಿದೆ.