
ಹಾಸನ: ಜಿಲ್ಲೆಯಲ್ಲಿ ಜೂನ್ 1ರಿಂದ ಜುಲೈ 22ರವರೆಗೆ ಸುರಿದ ಭಾರಿ ಮಳೆಯಿಂದ 24 ಮನೆಗಳು ಸಂಪೂರ್ಣವಾಗಿ ನಾಶವಾಗಿದ್ದು, 190 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಐದು ಕೊಟ್ಟಿಗೆಗಳು ನೆಲಕಚ್ಚಿ, ಏಳು ಜಾನುವಾರುಗಳು ಮೃತಪಟ್ಟಿವೆ. ಸುಮಾರು 115 ಎಕರೆಯಷ್ಟು ತೋಟಗಾರಿಕೆ ಬೆಳೆ ನಾಶವಾಗಿದೆ ಮತ್ತು ಈ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮಲೆನಾಡು ಪ್ರದೇಶಗಳಲ್ಲಿ, ಕಾಫಿ ತೋಟಗಳು ಮತ್ತು ಅರಣ್ಯ ಪ್ರದೇಶಗಳಲ್ಲಿ ಮಳೆಯಿಂದ ವಿದ್ಯುತ್ ಕಂಬಗಳು ಉರುಳುತ್ತಿದ್ದ ಕಾರಣ ನಿರಂತರ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಇದರಿಂದ ಸೆಸ್ಕ್ ಅಧಿಕಾರಿಗಳಿಗೆ ತೀವ್ರ ತೊಂದರೆ ಉಂಟಾಗಿದೆ. ಇತ್ತ ಜಿಲ್ಲೆಯಲ್ಲಿ ಜನವರಿಯಿಂದ ಜುಲೈ 22ರ ತನಕ 753 ಮಿ.ಮೀ ಮಳೆ ದಾಖಲಾಗಿದ್ದು, ಇದು ವಾಡಿಕೆ ಪ್ರಮಾಣವಾದ 521 ಮಿ.ಮೀಗಿಂತ ಶೇ.46ರಷ್ಟು ಹೆಚ್ಚಾಗಿದೆ. ಆದರೆ ಮಳೆ ಮುಖ್ಯವಾಗಿ ಸಕಲೇಶಪುರ, ಬೇಲೂರು, ಹಾಸನ ತಾಲೂಕಿನೊಳಗೆ ಸೀಮಿತವಾಗಿದ್ದು, ಅರಸೀಕೆರೆ, ಚನ್ನರಾಯಪಟ್ಟಣ ಹಾಗೂ ಹೊಳೆನರಸೀಪುರ ತಾಲೂಕುಗಳು ಮಳೆಯ ಕೊರತೆಯಿಂದ ಬಳಲುತ್ತಿವೆ. ಜಿಲ್ಲೆಯಾದ್ಯಂತ 85 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆಯಾಗಿದ್ದು, ಅದರಲ್ಲಿ 12 ಸಾವಿರ ಹೆಕ್ಟೇರಿನಲ್ಲಿ ಮಳೆ ಹಾಗೂ ಕೀಟದ ಹಾನಿಯಾಗಿದೆ. ಕೃಷಿ ಇಲಾಖೆಯ ಪ್ರಕಾರ ಕೀಟ ಬಾಧೆ ಇದೀಗ ನಿಯಂತ್ರಣಕ್ಕೆ ಬರುತ್ತಿದೆ. ಸಕಲೇಶಪುರದಲ್ಲಿ ರಸ್ತೆ, ಮನೆ ಹಾಗೂ ಮರಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜು ಅವರು ಸ್ಥಳಕ್ಕೆ ಭೇಟಿ ನೀಡಿ ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸಿದ್ದಾರೆ. ಈ ಮಧ್ಯೆ ಮಳೆಹಾನಿಗೆ ಸರಕಾರ ನೀಡುತ್ತಿರುವ ಪರಿಹಾರದ ಪ್ರಮಾಣ ಕಡಿಮೆಯಾಗಿದೆ ಎಂಬ ಅಸಮಾಧಾನವೂ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ಜಿಲ್ಲಾಡಳಿತ ಕಂಟ್ರೋಲ್ ರೂಂ ಸ್ಥಾಪಿಸಿ, ತಹಸೀಲ್ದಾರರು ಮತ್ತು ಇತರ ಅಧಿಕಾರಿಗಳಿಗೆ ರಜೆ ನಿರ್ಬಂಧಿಸಿ, ಪ್ರತಿದಿನದ ಮಳೆಹಾನಿಗೆ ಕ್ರಮ ಕೈಗೊಳ್ಳುತ್ತಿದೆ.