
ಬೆಂಗಳೂರು: ಭಾರತದ ಪ್ರಮುಖ ಸಂಗೀತ ಸ್ಟ್ರೀಮಿಂಗ್ ವೇದಿಕೆಯಾದ ‘ಗಾನಾ’ ಸಂಸ್ಥೆ 2025ರ ಜನವರಿಯಿಂದ ಜೂನ್ ವರೆಗೆ ಜನಪ್ರಿಯವಾಗಿದ್ದ ಹಾಡುಗಳ ‘ಮಿಡ್ ಇಯರ್ ಮ್ಯಾಜಿಷಿಯನ್ಸ್’ ಎಂಬ ಹೆಸರಿನ ವರದಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಸ್ಥಳೀಯ ಭಾಷೆಗಳ ಗಾಯಕರು ಮುಂಚೂಣಿಯಲ್ಲಿ ಇದ್ದಾರೆ. ಟಾಪ್ 50 ಗಾಯಕರ ಹಾಡುಗಳ ಪಟ್ಟಿ ಗಾನಾ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಗಾನಾ ಬಿಡುಗಡೆ ಮಾಡಿದ ವರದಿಯ ಪ್ರಕಾರ, ದಕ್ಷಿಣ ಭಾರತದ ಹೆಮ್ಮೆಗಾಯಕ ಹಾಗೂ ಕನ್ನಡದ ಗಾನಗಾರುಡಿಗ ಎನಿಸಿಕೊಂಡ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಕನ್ನಡ, ತಮಿಳು, ಮಲಯಾಳಂ, ತೆಲುಗು, ಹಿಂದಿ ಸೇರಿದಂತೆ 16 ಭಾಷೆಗಳ ಹಾಡುಗಳು ಇಂದಿಗೂ ಶ್ರೋತೃಗಳ ಮನ ಸೆಳೆಯುತ್ತಿವೆ. ಇವರ ಹಾಡುಗಳು ಎಲ್ಲಾ ವಯಸ್ಸಿನ ಸಂಗೀತಪ್ರಿಯರು ಮರುಮರು ಕೇಳುವಂತಹ ಭಾವುಕತೆಯುಳ್ಳವುಗಳಾಗಿ ಉಳಿದಿವೆ. ದೊಡ್ಡ ಸಂಖ್ಯೆಯ ಜನರನ್ನು ತಲುಪಿರುವ ಪ್ರಮುಖ ಗಾಯಕರಾಗಿಯೂ, ಸಿನಿಮಾ ಸಂಗೀತದಲ್ಲಿ ಅತಿ ಹೆಚ್ಚು ಮೆಚ್ಚುಗೆ ಪಡೆದ ಫೇವರಿಟ್ ಗಾಯಕರಾಗಿಯೂ ಎಸ್ಪಿಬಿಯವರು ಗುರುತಿಸಲ್ಪಟ್ಟಿದ್ದಾರೆ.