
ಸುಳ್ಯ: ಆಫ್ರೀಕಾದ ದೈತ್ಯ ಬಸವನ ಹುಳವು ಸುಳ್ಯ ತಾಲ್ಲೂಕಿನ ಕೃಷಿ ತೋಟಗಳಲ್ಲಿ ಕಂಡು ಬಂದಿದ್ದು. ಇದರಿಂದಾಗಿ ಕೃಷಿಕರು ಆತಂಕಕ್ಕೀಡಾಗಿದ್ದಾರೆ.
ವಿಶ್ವದ ಅತ್ಯಂತ ಹಾನಿಕಾರಕ ಹಾಗೂ ದೈತ್ಯ ಬಸವನ ಹುಳು ಇದಾಗಿದ್ದು. ಇದು ದ್ವಿಲಿಂಗ ಜೀವಿಯಾಗಿದ್ದು, ಗ್ಯಾಸ್ಟ್ರೋಪೊಡಾ ವರ್ಗದ ಮೊಲಸ್ಕಾ ಜಾತಿಗೆ ಸೇರಿದೆ.
ಸುಳ್ಯ ತಾಲ್ಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಪಾನತ್ತಿಲ ಪ್ರದೇಶದ 7-8 ಕೃಷಿಕರ ತೋಟದಲ್ಲಿ ಆಫ್ರಿಕನ್ ಬಸವನ ಹುಳುಗಳು ಕಂಡು ಬಂದಿದ್ದು. ಇದು ಶಂಕದ ಆಕೃತಿಯಲ್ಲಿದ್ದು, ಚಿಪ್ಪಿನಲ್ಲಿರುವ ಈ ಹುಳುವು 2 ರಿಂದ 12 ವರ್ಷದವರೆಗೂ ಬದುಕುತ್ತದೆ. ಹಂತ ಹಂತವಾಗಿ ತನ್ನ ಜೀವಿತಾವಧಿಯಲ್ಲಿ ಸರಿ ಸುಮಾರು 1200ರಷ್ಟು ಮೊಟ್ಟೆಗಳನ್ನು ಇಡುತ್ತವೆ.
ಆಫ್ರೀಕಾದ ಬಸವನ ಹುಳುವು ೫೦ಕ್ಕಿಂತ ಹೆಚ್ಚು ಸಸ್ಯ ಪ್ರಭೇದಗಳನ್ನು ತಿನ್ನುತ್ತವೆ. ಈ ಹುಳವು ಹಗಲಿನಲ್ಲಿ ನೆಲದ ಮೇಲಿದ್ದು, ಗಿಡಗಳ ಬುಡದಲ್ಲಿ, ಪೊದೆಗಳಲ್ಲಿ ಅವಿತು, ಸಂಜೆ ಬಳಿಕ ಕೃಷಿಗಿಡಗಳನ್ನು ಹತ್ತಿ ಕೃಷಿಯನ್ನು ನಾಶ ಮಾಡುತ್ತದೆ. ತೆಂಗಿನ ಮರ, ಬಾಳೆ ಗಿಡ, ಅಡಿಕೆ ಮರಗಳಿಗೆ ಈ ಹುಳುಗಳು ಹತ್ತುತ್ತವೆ. ೪-೫ ವರ್ಷಗಳ ಹಿಂದೆ ಬೆಳ್ತಂಗಡಿ ಹಾಗೂ ಮಡಿಕೇರಿಯಲ್ಲಿ ಈ ಹುಳುಗಳು ಪತ್ತೆಯಾಗಿತ್ತು. ಉಬಡ್ಕದ ಪಾನತ್ತಿನ ಭಾಗದಲ್ಲಿ ಹತೋಟಿಗೆ ತರಲು ಕ್ರಮ ಕೈಗೊಳ್ಳುವಂತೆ ರೈತರಿಗೆ ಸಲಹೆ ನೀಡಿರುವ ತೋಟಗಾರಿಕಾ ಇಲಾಖೆ ಹಾಗೂ ಕೆವಿಕೆ ಮಂಗಳೂರು ತಂಡ. ರೈತರು ಈಗಾಗಲೇ ಇದನ್ನು ಹತೋಟಿ ಮಾಡಿದರೆ ಉಲ್ಬಣವಾಗುವ ಸಂಖ್ಯೆಯನ್ನು ತಡೆಗಟ್ಟಬಹುದು ಎಂದು ತಿಳಿಸಿದ್ದಾರೆ.
ಆಫ್ರಿಕನ್ ಬಸವನ ಹುಳುಗಳು ಹೆಚ್ಚಾಗಿ ಸಗಣಿ, ಪಪ್ಪಾಯ, ಅನಾನಸ್ ಹಾಗೂ ಕೊಳೆತ ತರಕಾರಿಗಳಿಗೆ ಆಕರ್ಷಿತವಾಗುತ್ತದೆ. ಆದ್ದರಿಂದ ಇಂತಹ ಪದಾರ್ಥಗಳನ್ನು ತೋಟಗಳಲ್ಲಿ ಸಂಗ್ರಹಿಸಿ ಅವುಗಳನ್ನು ಆಕರ್ಷಿಸಿ ನಾಶಪಡೆಸಬಹುದಾಗಿದೆ. ಇವುಗಳ ಕಾಟವನ್ನು ತಡೆಗಟ್ಟಲು ಬೂದಿ, ಸುಣ್ಣ, ಕಾಸ್ಟಿಕ್ ಸೋಡಾ ಹಾಗೂ ಸೂಪರ್ ಫಾಸ್ಪೋಟ್ನ್ನು ಬಳಸಿ ತೋಟದ ಸುತ್ತಮುತ್ತಲಿನ ಪ್ರದೇಶಗಳಿಗೆ ಹಾಕುವುದರಿಂದಲೂ ಕೂಡ ಇದನ್ನು ನಾಶಪಡಿಸಬಹುದಾಗಿದೆ. ಹಾಗೆಯೇ ಸಗಣಿಯ ನೀರನ್ನು ಗೋಣಿಗಳಿಗೆ ಹಾಕಿ ಒದ್ದೆ ಮಾಡಿ ಅದನ್ನು ಅಲ್ಲಿ ಇಡುವುದರಿಂದ ಅದನ್ನು ನಿರ್ಮೂಲನೆ ಮಾಡಬಹುದಾಗಿದೆ ಎಂದು ತೋಟಗಾರಿಕಾ ಇಲಾಖೆಯು ಮಾಹಿತಿಯನ್ನು ನೀಡಿದೆ.