
ರಾಮನಗರ : ರಾಮನಗರ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆದರೆ, ಜಿಲ್ಲೆಯ ಪ್ರಮುಖ ಸರ್ಕಾರಿ ಆಸ್ಪತ್ರೆಗೆ ಮಾತ್ರವಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಹೃದಯ ತಜ್ಞರ ಲಭ್ಯತೆಯ ಕೊರತೆಯಿದೆ. ಜಿಲ್ಲಾಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಬೇಕಾದ ಸೌಲಭ್ಯಗಳು ಇದ್ದರೂ, ತಜ್ಞರ ನೇಮಕವಾಗಿಲ್ಲ. ಪರಿಣಾಮವಾಗಿ, ಗಂಭೀರ ರೋಗಿಗಳನ್ನು ತಕ್ಷಣವೇ ಬೆಂಗಳೂರು ಆಸ್ಪತ್ರೆಗೆ ಕಳುಹಿಸುವ ಪರಿಸ್ಥಿತಿ ಉಂಟಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಇದ್ದರೂ, ಹೃದಯ ತಜ್ಞರ ನೇಮಕಾತಿ ಆಗಿಲ್ಲ. ಹೃದಯಾಘಾತದ ಸಂದರ್ಭಗಳಲ್ಲಿ ಸಾಮಾನ್ಯ ವೈದ್ಯರು ತಾತ್ಕಾಲಿಕ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ರೋಗಿಯ ಸ್ಥಿತಿ ಗಂಭೀರವಾಗಿದ್ದರೆ ಅವರನ್ನು ತಕ್ಷಣವೇ ಬೆಂಗಳೂರಿಗೆ ರವಾನಿಸಲಾಗುತ್ತಿದೆ. ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ವರ್ಗಾವಣೆ ಹಾಗೂ ರೋಗಿಯ ಹಿನ್ನೆಲೆ ತಿಳಿದು ಚಿಕಿತ್ಸೆ ನೀಡುವಷ್ಟರಲ್ಲಿ ಕೆಲವರ ಪ್ರಾಣ ಪಕ್ಷಿ ಹಾರಿ ಹೋದ ಸಾಕಷ್ಟು ಉದಾಹರಣೆ ಇದೆ. ಹಾಗಾಗಿ ಇಂತಹ ಘಟನೆಗಳಿಗೆ ತಕ್ಷಣಕ್ಕೆ ಚಿಕಿತ್ಸೆ ನೀಡುವ ವ್ಯವಸ್ಥೆ ಆಗಬೇಕಿದೆ. ಇದರಿಂದಾಗಿ ರೋಗಿಗಳು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ತಿರುಗುವುದು ಕಡಿಮೆಯಾಗುವುದರ ಜತೆಗೆ, ತಕ್ಷಣಕ್ಕೆ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ.