
ಕಿಗ್ಗಾ: ಹೇಳುವವರೂ ಕೇಳುವವರು ಯಾರೂ ಇಲ್ಲದೆ. ಬೇಕಾಬಿಟ್ಟಿಯಾಗಿ ನೆನೆಗುದಿಗೆ ಬಿದ್ದಿದ್ದ ಕಿಗ್ಗಾ ಶ್ರೀ ಶಾಂತಾ ಸಮೇತ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯಕ್ಕೆ ಇದೀಗ ವ್ಯವಸ್ಥಾಪನಾ ಸಮೀತಿ ರಚನೆಯಾಗಿ ಅಸ್ಥಿತ್ವಕ್ಕೆ ಬಂದಿದೆ.
ಸುಮಾರು ಆರೇಳು ತಿಂಗಳ ಹಿಂದೆಯೇ ಮುಜರಾಯಿ ದೇವಸ್ಥಾನಕ್ಕೆ ಸಮಿತಿ ರಚಿಸಲು ನಿಯಮಾನುಸಾರ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿತ್ತು.
ಸುಮಾರು 30ಕ್ಕೂ ಹೆಚ್ಚಿನ ಆಸಕ್ತರು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಮಾಜಿ ಧರ್ಮದರ್ಶಿಗಳು, ಸ್ಥಳೀಯರು ಧಾರ್ಮಿಕ ಪ್ರಜ್ಞೆ, ಅನುಭವಸ್ಥರು, ದೇವಾಲಯದ ಎಲ್ಲಾ ಕಾರ್ಯಗಳಲ್ಲಿ ಕ್ರಿಯಾಶೀಲರಾದವರು ಬಹಳ ಮಂದಿ ಇದ್ದರು.
ಆದರೆ ಇಲ್ಲಿ ದೇವಾಲಯದ ಆಡಳಿತ ಮಂಡಳಿಗೆ ಸದಸ್ಯರಾಗಲು ಬೇಕಾಗುವ ಅರ್ಹತೆಗಳನ್ನು ಪರಿಗಣಿಸದೆ ಆಡಳಿತ ರೂಢ ಕಾಂಗ್ರೆಸ್ ಪಕ್ಷದ ಶಾಸಕರು, ತಮ್ಮ ಪಕ್ಷದ ಕಾರ್ಯಕರ್ತರನ್ನು ಮಾತ್ರ ಪರಿಗಣಿಸಿ ಪಕ್ಷ ರಾಜಕಾರಣ ಮಾಡಿ. ವ್ಯವಸ್ಥಾಪನಾ ಸಮಿತಿಯನ್ನು ಮತಗಟ್ಟೆಯ ಸಮಿತಿಯ ರೀತಿಯಲ್ಲಿ ರಚಿಸಿದ್ದಾರೆ! ಕಿಗ್ಗಾ ಇತಿಹಾಸದಲ್ಲಿ ಈ ರೀತಿಯಾದ ಸಮಿತಿ ರಚನೆ ಇದೂವರೆಗೂ ಆಗಿರಲಿಲ್ಲ ಯಾವಾಗಲೂ ಎಲ್ಲಾ ಪಕ್ಷದಿಂದ, ಎಲ್ಲಾ ಸಮುದಾಯದಿಂದ ಯಾವುದೇ ಬೇದ ಭಾವಗಳಿಲ್ಲದೇ ಧಾರ್ಮಿಕ ಅನುಭವ ಸೇವಾ ಮನೋಭಾವವೇ ಇಲ್ಲಿ ಪ್ರಧಾನವಾಗಿರುತ್ತಿತ್ತು. ಧಾರ್ಮಿಕ ದತ್ತಿ ಇಲಾಖೆಯ ನಿಯಮಾವಳಿ ಪ್ರಕಾರ ದೇವಾಲಯದ ಸೇವಾಕರ್ತರು ಆಗಮೋಕ್ತ ವಿಧಾನದ ಅನುಭವಗಳು, ದಾನಿಗಳು ಈ ಎಲ್ಲಾ ವಿಚಾರ ಪ್ರಮುಖ ಮಾನದಂಡವಾಗಿರುತಿತ್ತು.
ಆದರೆ ಸರ್ಕಾರ ಕಿಗ್ಗಾ ಸಮಿತಿ ರಚನೆಯನ್ನು ಪಕ್ಷದ ರಾಜಕಾರಣ ಎಂಬ ರೀತಿ ಮಾಡಿದೆ! ಈ ದೇವಾಲಯದ ಆಡಳಿತದ ಸಿಂಹಾವಲೋಕನ ಮಾಡಿದರೆ ಪ್ರಮುಖವಾಗಿ ಇಲ್ಲಿ ಬ್ರಾಹ್ಮಣ ಸಮುದಾಯದ ಮೂರು ಅಥವಾ ನಾಲ್ಕು ಸದಸ್ಯರು ಪ್ರತೀ ಬಾರಿ ಇರುತ್ತಿದ್ದರು. ಈ ಸಾಲಿನಲ್ಲಿ ಉದ್ದೇಶ ಪೂರ್ವಕವಾಗಿ ಬ್ರಾಹ್ಮಣ ಸಮುದಾಯವನ್ನು ದೂರ ಇಡಲಾಗಿದೆ.
ಅರ್ಜಿ ಸಲ್ಲಿಸುವ ವಾಯಿದೆ ಮೀರಿದ ಮೇಲೂ ತಮಗೆ ಬೇಕಾದವರಿಂದ ಅರ್ಜಿ ಹಾಕಿಸಿ, ಬ್ರಾಹ್ಮಣರು ಸಮೀತಿಗೆ ಬಂದರೆ ಬೇರೆ ಜನಾಂಗದವರು ಅಧ್ಯಕ್ಷರಾಗಲು ಕಷ್ಟವಾಗುತ್ತದೆ ಎಂಬ ಕಾರಣದಿಂದ ಬಂದಿದ್ದ ಸುಮಾರು 8 ಬ್ರಾಹ್ಮಣರ ಸಮುದಾಯದವರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.
ಸಮಿತಿ ರಚನೆಯಲ್ಲಿ ಅಂದರೆ ಅಧ್ಯಕ್ಷರ ಆಯ್ಕೆಯಲ್ಲೂ ಶಾಸಕರ ಮಾತಿಗೆ ಕಿಮ್ಮತ್ತಿಲ್ಲದೆ, ಅವರವರಲ್ಲೇ ಗೌಜಿ-ಗಲಾಟೆಯಾಗಿ ಚುನಾವಣೆ ನಡೆದಿದೆ. ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಉದ್ದೇಶವಿತ್ತೋ ಅದೂ ಆಗದೆ ಕೊನೆಗೆ ಲಾಟರಿ ಎತ್ತಿ ಯಾರು ಅಧ್ಯಕ್ಷ ಆಗಬೇಕಿತ್ತೋ ಅವರಿಗೆ ಸಿಗದೆ ಇನ್ನಾರೋ ಅಧ್ಯಕ್ಷರಾದರು! ಈಗ ಕಿಗ್ಗಾ ದೇವಾಲಯದ ಆಡಳಿತ ಮಂಡಳಿ ರಚನೆ ಮಾಡಿದ ಶಾಸಕರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಮಳೆ ಬೆಳೆಯ ದೇವರಾಗಿ ಜಗತ್ಪ್ರಸಿದ್ಧವಾದ ಈ ದೇವಾಲಯದ ಅಭಿವೃದ್ಧಿ ಕನಸಿನ ಮಾತಾಗಿದೆ. ವಿಶೇಷ ವಿಧಿ ವಿಧಾನಗಳು, ಸಂಪ್ರದಾಯಗಳು, ಆಚಾರ-ವಿಚಾರಗಳು, ಪೂಜಾ ಕೈಂಕರ್ಯಗಳನ್ನು ಹೊಂದಿರುವ ಈ ದೇವಾಲಯಕ್ಕೆ ಈಗ ಕಾಂಗ್ರೆಸ್ ಕಮಿಟಿ ಅಸ್ಥಿತ್ವಕ್ಕೆ ಬಂದಿದೆ.
ಬ್ರಾಹ್ಮಣ ಸಮುದಾಯಕ್ಕೆ ದೊಡ್ಡ ಆಘಾತವಾಗಿದೆ. ಚುನಾವಣೆ ಬರಲಿ ಆಗ ಪ್ರಶ್ನಿಸುತ್ತೇವೆ ಎಂಬ ನೋವಿನ ಮಾತು ಕೇಳಿ ಬರುತ್ತಿದೆ.