
ಕುಶಾಲನಗರ: ಮಡಿಕೇರಿ ಶಾಸಕ ಡಾ.ಮಂತರ್ ಗೌಡ ರಾಜ್ಯ ಸರ್ಕಾರ ಕಾರ್ಯರೂಪಕ್ಕೆ ತಂದಿರುವ ಆಶಾಕಿರಣ ದೃಷ್ಠಿ ಕೇಂದ್ರದ ಸೇವೆ ಮನೆ-ಮನೆಗೂ ತಲುಪಬೇಕು ಎಂದು ಹೇಳಿದರು.
ಆಶಾಕಿರಣ ಯೋಜನೆಯು ಸರ್ಕಾರದ ಕನಸಿನ ಯೋಜನೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ ಸತೀಶ್ ಕುಮಾರ್ ಎಂದರು. ರಾಜ್ಯಾದ್ಯಂತ ಯೋಜನೆ ಅನುಷ್ಠಾನಗೊಂಡಿದೆ. ಕಳೆದ ವರ್ಷ ಸಾವಿರ ಜನರಿಗೆ ತಪಾಸಣೆ ಮಾಡಲಾಗಿತ್ತು. ಈ ವರ್ಷ ಕೂಡ ತಪಾಸಣೆ ಮಾಡಲಾಗುತ್ತಿದ್ದು, ಇದುವರೆಗೆ 1220 ಕನ್ನಡಕ ನೀಡಲಾಗಿದೆ. ಜನರು ಕಣ್ಣಿನ ಸಮಸ್ಯೆಯಿಂದ ಬಳಲಬಾರದು. ಬಡವರಿಗೆ ಈ ಸೇವೆ ದೊರೆಯಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ ಎಂದರು.
ರಾಜ್ಯದಲ್ಲಿ ಒಂದು ಕೋಟಿ ಜನರಿಗೆ ದೃಷ್ಠಿ ಸಮಸ್ಯೆಯಿದ್ದು. 5 ವರ್ಷದಿಂದ 90ವರ್ಷದವರಿಗೆ ಕಣ್ಣಿನ ಸಮಸ್ಯೆ ಕಂಡುಬರುತ್ತಿದೆ. ಜಿಲ್ಲಾಡಳಿತ, ಕೊಡಗು ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಠಿ ಮಾಂದ್ಯತೆ ನಿಯಂತ್ರಣ ಕಾರ್ಯಕ್ರಮ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ, ಕುಶಾಲನಗರ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ಆಶಾಕಿರಣ ದೃಷ್ಠಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಅಂಧತ್ವ ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದ ಆಶಾಕಿರಣ ದೃಷ್ಟಿ ಕೇಂದ್ರ ಸ್ಥಾಪಿಸಲಾಗಿದೆ ಎಂದರು. ಉಚಿತವಾಗಿ ಪರೀಕ್ಷಿಸಿ ಕನ್ನಡಕ ಕೊಡಬೇಕು. ಹೆಚ್ಚಿನ ಚಿಕಿತ್ಸೆ ಅಗತ್ಯ ಕಂಡುಬಂದಲ್ಲಿ ಜಿಲ್ಲಾಸ್ಪತ್ರೆಗೆ ಕಳುಹಿಸಬೇಕು ಎಂದರು.
ಕೊಡಗು ಜಿಲ್ಲಾ ಅಂಧತ್ವ ನಿರ್ಮೂಲನಾ ಅಧಿಕಾರಿ ಡಾ. ಆನಂದ್, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ದಾಮೋದರ್, ಕೂಡಿಗೆ ಟಿ.ಪಿ ಹಮೀದ್, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಆರೋಗ್ಯ ಶಿಕ್ಷಣಾಧಿಕಾರಿ ಡಾ.ಎಂ.ಎನ್ ಮಧುಸೂದನ್, ವೈದ್ಯರು, ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.