
ಮಡಿಕೇರಿ: ಪೊನ್ನಂಪೇಟೆ ತಾಲ್ಲೂಕಿನ ಪೊನ್ನಪ್ಪಸಂತೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಸಾವನಪ್ಪಿರುವ ಘಟನೆ ಇಂದು ಮುಂಜಾನೆ ನಡೆದಿದ್ದು. ಮೃತ ವ್ಯಕ್ತಿಯು ಮಾನಸಿಕ ಅಸ್ವಸ್ಥನೆಂದು ಹೇಳಲಾಗಿದೆ.
ಕಾಡಾನೆಯು ಮೊದಲು ಸೈಕಲ್ನಲ್ಲಿ ಸಂಚರಿಸುತ್ತಿದ್ದ ಸ್ಥಳೀಯ ಗ್ರಾಮಸ್ಥ ಅಜಯ್ ಎಂಬುವವರ ಮೇಲೆ ದಾಳಿ ಮಾಡಲು ಮುಂದಾಗಿದೆ. ಅಜಯ್ ಅವರು ಸೈಕಲ್ನ್ನು ಬಿಟ್ಟು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಇದೇ ಸಮಯದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ನಡೆಸಿದ್ದು ವ್ಯಕ್ತಿಯು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.
ಆಮ್ ಆದ್ಮಿ ಪಾರ್ಟಿಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯನವರು ಕೊಡುಗು ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಸರಣಿ ಸಾವುಗಳಾಗುತ್ತಿದ್ದು, ಇದಕ್ಕೆ ಅರಣ್ಯ ಇಲಾಖೆಯ ವೈಫಲ್ಯ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. ಅರಣ್ಯ ಸಚಿವ ಈಶ್ವರ ಖಂಡ್ರೆ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜ ಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.