
ಶಿವಮೊಗ್ಗ: ತುರ್ತು ಅಪಘಾತದ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಕೇಂದ್ರ ಸರ್ಕಾರದ ಜನಸುರಕ್ಷಾ ಯೋಜನೆಯು ನೆರವಿಗೆ ಬರಲಿದೆ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಸುಜಯ್ ಹೇಳಿದರು. ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಆಯೋಜಿಸಿದ ಜನ ಸುರಕ್ಷ ಅಭಿಯಾನದಲ್ಲಿ ಮಾತನಾಡಿ, ಪ್ರತಿಯೊಬ್ಬ ಬ್ಯಾಂಕ್ ಖಾತೆದಾರರಿಗೆ ಗ್ರಾಹಕರ ಸಾಮಾಜಿಕ ದೃಷ್ಠಿಯಿಂದ ಯೋಜನೆಯ ಮಾಹಿತಿ ನೀಡಲಾಗುತ್ತಿದೆ. ವಾರ್ಷಿಕವಾಗಿ ಕಡಿಮೆ ಪ್ರೀಮಿಯಂ ಕಟ್ಟಿದರೂ ಕಷ್ಟದ ಸಮಯದಲ್ಲಿ ಆರ್ಥಿಕವಾಗಿ ಭದ್ರತೆ ಸಿಗಲಿದೆ ಎಂದು ತಿಳಿಸಿದರು. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಿಂದ 18 ರಿಂದ 70 ವರ್ಷದೊಳಗಿನ ಎಲ್ಲಾ ಬ್ಯಾಂಕ್ ಗ್ರಾಹಕರಿಗೆ ಅಪಘಾತದಿಂದ ಸಾಪನಪ್ಪಿದರೆ ಕುಟುಂಬಕ್ಕೆ 2 ಲಕ್ಷ ರೂ ವಿಮೆ ಹಣ ದೊರೆಯುತ್ತದೆ.
18 ರಿಂದ 40 ವರ್ಷಗಳ ಒಳಗೆ ಅಟಲ್ ಪೆನ್ಷನ್ ಯೋಜನೆಯಲ್ಲಿ ನೊಂದಣಿ ಮಾಡಿಕೊಂಡರೆ 60 ವರ್ಷದ ನಂತರ ಪಿಂಚಣಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಲ್ಲಿ 50 ವರ್ಷಗಳ ಒಳಗೆ ನೊಂದಣಿ ಮಾಡಿಕೊಂಡವರು 55 ವರ್ಷದೊಳಗೆ ಮೃತ ಪಟ್ಟರೆ ಎರಡು ಲಕ್ಷ ರೂ ಕುಟುಂಬಕ್ಕೆ ಸಿಗಲಿದೆ ಎಂದರು.
ಗ್ರಾಹಕರ ಕುಂದು ಕೊರೆತೆಗಳ ಬಗ್ಗೆ ಗ್ರಾಮಪಂಚಾಯಿತಿ ಸದಸ್ಯರು ಬ್ಯಾಂಕ್ ಅಧಿಕಾರಿಗಳ ಜೊತೆ ಸಂವಾದ ನಡೆಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ ಲೋಕಪ್ಪ, ಉಪಾಧ್ಯಕ್ಷೆ ರೇಣುಕಾ ಸುರೇಶ್, ಸದಸ್ಯರಾದ ಇಸಾಕ್, ಹನುಮಂತ, ಪಿಡಿಒ ರಾಜು, ಎಚ್. ಗಿರೀಶ್, ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಜೈ ಕುಮಾರ್, ನಿರ್ದೇಶಕ ಲೋಕಪ್ಪ, ಕಾರ್ಯದರ್ಶಿ ರಿತೇಶ್, ಕೆಜಿಬಿ ಶಾಖಾ ಸಹಾಯಕ ವ್ಯವಸ್ಥಾಪಕ ಮನೋಜ್ ಕುಮಾರ್ ಇತರರಿದ್ದರು.