
ಕುಂದಾಪುರ/ಕಾರ್ಕಳ: ರಾಜ್ಯ ಸರಕಾರ ಸ್ಥಳೀಯ ಸಂಪನ್ಮೂಲ ಬಳಸಿ 4,134 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷಲ್ಲೇ ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮವನ್ನು ನೂತನವಾಗಿ ಆರಂಭಿಸಲು ಆದೇಶಿಸಿದೆ. ಕುಂದಾಪುರ, ಬೈಂದೂರು ಮತ್ತು ಕಾರ್ಕಳ ಶೈಕ್ಷಣಿಕ ವಲಯದಲ್ಲಿ ಒಟ್ಟು 45 ಶಾಲೆಗಳನ್ನು ಆಂಗ್ಲ ಮಾಧ್ಯಮ ಶಿಕ್ಷಣ ಪ್ರಾರಂಭಕ್ಕೆ ಆಯ್ಕೆ ಮಾಡಲಾಗಿದೆ.
ಗಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯ ಶಿಕ್ಷಣ ದೊರೆಯಲಿದೆ. ಇನ್ನೂ ಕೆಲವು ಶಾಲೆಗಳ ಪೋಷಕರ ಬೇಡಿಕೆ ಈಡೇರಿಕೆಗೆ ಬಾಕಿಯಿದೆ. ರಾಜ್ಯ ಸರಕಾರ ಸ್ಥಳೀಯ ವಿದ್ಯಾರ್ಥಿಗಳಿಗೆ ಮಾತೃಭಾಷೆಯ ಜೊತೆ ಆಂಗ್ಲ ಭಾಷೆ ಕೌಶಲ ಬೆಳೆಸಲು ಪ್ರತಿ ಶೈಕ್ಷಣಿಕ ವಲಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿ ಹೊಂದಿರುವ ಶಾಲೆಯ ಪೈಕಿ ಅವರೋಹಣ ಕ್ರಮದಲ್ಲಿ ಮೊದಲ 15 ಶಾಲೆಗಳನ್ನು ಪರಿಗಣಿಸಿದೆ. ಒಂದು ವೇಳೆ ಈ ರೀತಿ 15 ಶಾಲೆಗಳು ಲಭ್ಯವಿಲ್ಲದಿದ್ದರೆ ತಾಲ್ಲೂಕಿನಲ್ಲಿರುವ ಎಲ್ಲ ಶಾಲೆಗಳನ್ನು ಪರಿಗಣಿಸಲಾಗಿದೆ.
ಸರ್ಕಾರದಿಂದ ಆದೇಶ ಬಂದಿದ್ದು ಶಾಲೆಯ ಅಭಿವೃದ್ಧಿ ಸಮಿತಿಗಳ ಜೊತೆ ಸಭೆ ನಡೆಸಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಈ ವರ್ಷವೇ ಆಂಗ್ಲ ಮಾಧ್ಯಮ ಪ್ರಾರಂಭಿಸಲಗುವುದು. ಮುಂದಿನ ದಿನಗಳಲ್ಲಿ ಶಾಲೆಗೆ ಬೇಕಾದ ಅಗತ್ಯ ಸೌಕರ್ಯಗಳು ದೊರೆಯಲಿವೆ ಎಂದಿದ್ದಾರೆ.