
ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಆಟೋ ಪ್ರಯಾಣ ದರವು ಬೆಂಗಳೂರಿಗಿಂತಲೂ ಹೆಚ್ಚಾಗಿದೆ. ಶಿವಮೊಗ್ಗ ನಗರದ ರೈಲು ನಿಲ್ದಾಣ ಆವರಣದಲ್ಲಿ ಆಟೋರಿಕ್ಷಾ ಪ್ರಿಪೇಯ್ಡ ಕೌಂಟರ್ ಆರಂಭಿಸಬೇಕೆಂಬ ಬೇಡಿಕೆ ಕಳೆದ 25 ವರ್ಷಗಳಿಂದ ಚರ್ಚೆಯಲ್ಲಿದೆ. ಆದರೆ ಇದುವರೆಗೆ ಮಾಡಲು ಸಾಧ್ಯವಾಗಲಿಲ್ಲ. ಟೆಂಡರ್ ಕರೆದರೂ ಗುತ್ತಿಗೆದಾರರು ಭಾಗಿಯಾಗುತ್ತಿಲ್ಲ. ಆದ್ದರಿಂದ ಶಿವಮೊಗ್ಗ ನಗರದಲ್ಲಿ ಬೆಂಗಳೂರು ನಗರವನ್ನು ಮೀರಿಸುವ ಆಟೊ ಪ್ರಯಾಣ ದರವಿದೆ.
ಬೆಂಗಳೂರು ನಗರದಲ್ಲಿ ಎರಡು ಕಿ.ಮೀ ಪ್ರಯಾಣದ ಕನಿಷ್ಟ ಆಟೋ ದರ 30 ರೂ ಇದ್ದು, ಅದರ ನಂತರ ಪ್ರತೀ ಕಿ.ಮೀ ಪ್ರಯಾಣಕ್ಕೆ 15 ರೂ ಇದೆ. ಅದನ್ನು 40 ರೂ ಗೆ ಹೆಚ್ಚಿಸುವಂತೆ ಆಟೋ ಚಾಲಕರ ಸಂಘವು ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ. ಈ ಹಿನ್ನಲೆಯಲ್ಲಿ ಕನಿಷ್ಠ ಆಟೋ ದರವನ್ನು 36 ರೂ ಹಾಗೂ ನಂತರದ ಕಿ.ಮೀ ಗೆ 18 ರೂ ಏರಿಕೆ ಮಾಡಿ ತೀರ್ಮಾನಿಸಲಾಗಿದೆ. ಸಾರಿಗೆ ಸಚಿವರು ಮತ್ತು ಸಿಎಂ ಒಪ್ಪಿಗೆ ಸೂಚಿಸಿದರೆ ಪರಿಷ್ಕೃತ ದರ ಜಾರಿಗೆ ಬರಲಿದೆ. ವಿಚಿತ್ರವೇನೆಂದರೆ ಶಿವಮೊಗ್ಗ ನಗರದಲ್ಲಿ 2022ರಲ್ಲಿ ಆಟೋ ಚಾಲಕರ ಸಂಘದ ಮನವಿಯಂತೆ, ಪ್ರತಿ ಒಂದೂವರೆ ಕಿಮೀ ಗೆ ಕನಿಷ್ಟ ದರ 40 ರೂ ಮತ್ತು ನಂತರದ ಒಂದು ಕಿ.ಮೀ ಗರಿಷ್ಠ 20 ರೂ ಪ್ರಯಾಣ ದರ ಪರಿಷ್ಕರಿಸಿದೆ. ಹೀಗಾಗಿ 4 ಕಿ.ಮೀ ಪ್ರಯಾಣಿಸಿದರೆ ಮೀಟರ್ ಹಾಕಿದಲ್ಲಿ ಕನಿಷ್ಠ 100 ರೂ ಅನ್ನು ಪ್ರಯಾಣಿಕರು ಪಾವತಿಸುವ ಅನಿವಾರ್ಯತೆ ಇದೆ.
ಪ್ರತಿ ಪ್ರಯಾಣಕ್ಕೆ ಒಂದೂವರೆ ಕಿ.ಮೀ ಗೆ 45 ರೂ ಆರ್ಥಿಕ ಹೊರೆ ಬೀಳಲಿದೆ. ಆರ್ಟಿಒ ದಿಂದ ಕನಿಷ್ಠ ದರವನ್ನು 35 ರೂ ಗೆ ಇಳಿಸಲು ಮುಂದಾದರೆ, ಆಟೋ ಮಾಲೀಕರು ಮತ್ತು ಚಾಲಕರು ಸುಮ್ಮನಿರುವುದಿಲ್ಲ. ಈ ಕಾರಣದಿಂದಾಗಿ ಆರ್ಟಿಒ ಈ ವಿಚಾರದಲ್ಲಿ ಮೌನವಾಗಿದೆ.
ಪ್ರೀಪೇಯ್ಡ್ ಕೌಂಟರ್ನ ಪ್ರಯೋಜನವೆಂದರೆ ಪ್ರಯಾಣಿಕರಿಂದ ಅಧಿಕ ಹಣ ವಸೂಲಿ ಮಾಡುವುದನ್ನು ತಪ್ಪಿಸುವುದು. ಸಂಭಾವ್ಯ ಸಮಸ್ಯೆಗಳಿಂದ ಅವರನ್ನು ರಕ್ಷಿಸುವುದು. ಶಿವಮೊಗ್ಗ ನಗರದಲ್ಲಿ ವಿಪರೀತ ಹಣ ವಸೂಲಿ ಮಾಡುತ್ತಿದ್ದಾರೆಂಬ ಆರೋಪವಿದೆ ಅದಕ್ಕೆ ಮುಕ್ತಿ ಸಿಗಬಹುದು. ಆದರೆ ಪ್ರೀ-ಪೇಯ್ಡ್ ಆರಂಭಿಸಬೇಕಾದರೆ ಕನಿಷ್ಠ ಒಂದು ಕಂಪ್ಯೂಟರ್, ನೆಟ್ವರ್ಕ್ ಮತ್ತು ಪ್ರತ್ಯೇಕ ಸಿಬ್ಬಂದಿಯನ್ನು ಆಯೋಜಿಸಬೇಕು. ಅವರಿಗೆ ಸಂಬಳ ನೀಡಿ ಗುತ್ತಿಗೆ ದಾರ ಲಾಭ ಮಾಡಿಕೊಳ್ಳಬೇಕು. ಅದೆಲ್ಲ ಆಗಿ-ಹೋಗುವ ಕಾರ್ಯಗಳಲ್ಲದ ಕಾರಣ ಆರಂಭದಿಂದಲೂ ಇದರ ಬಗ್ಗೆ ಚರ್ಚೆಯಾಗಿತ್ತಿದೆ ಹೊರತು ಕಾರ್ಯರೂಪಕ್ಕೆ ಬರಲು ಸಾಧ್ಯವಾಗುತ್ತಿಲ್ಲ.