
ಕೊಟ್ಟಿಗೆಹಾರ: ಚಾರಣದಿಂದ ದೊರಕುವ ಪ್ರಕೃತಿಯ ಸಾಮಿಪ್ಯದಿಂದ ನಿತ್ಯ ಬದುಕಿನ ಏಕತಾನತೆಯಿಂದ ಬಂದ ಜಡತೆ ಕಳೆದು ಜೀವನೋತ್ಸಾಹ ವೃದ್ದಿಯಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಎಲೆಕ್ಟ್ರೀಶಿಯನ್ ಕಮ್ ಸೂಪರ್ ವೈಸರ್ ಶ್ರೀನಿವಾಸ್ ಹೇಳಿದರು. ಕೊಟ್ಟಿಗೆಹಾರದ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಬಿದಿರುತಳಕ್ಕೆ ಹಮ್ಮಿಕೊಂಡಿದ್ದ ಮಳೆ ನಡಿಗೆ ಮತ್ತು ತೇಜಸ್ವಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಸ್ತುತ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ವಸ್ತು ಸಂಗ್ರಹಾಲಯ, ಕೀಟ ಸಂಗ್ರಹಾಲಯ ವೀಕ್ಷಣೆಗೆ ಲಭ್ಯವಿದ್ದು ಗಾಜಿನ ಓದಿನ ಮನೆ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಪುಸ್ತಕವನ್ನು ಓದುವ ಅಪೂರ್ವ ಅನುಭವವನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುವ ಅಪರೂಪದ ಆರ್ಕಿಡ್ಗಳ ಸಂಗ್ರಹಾಲಯ, ಚಿಟ್ಟೆ ಉದ್ಯಾನವನ ನಿರ್ಮಾಣವಾಗಲಿದೆ ಎಂದರು.
ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ ಆಯೋಜಿಸಿರುವ ಚಾರಣಗಳು ಮನೋರಂಜನೆಗೆ ಸೀಮಿತವಾಗಿರದೆ ಪ್ರಕೃತಿಯ ಅಧ್ಯಯನ ಪ್ರಮುಖ ಉದ್ದೇಶವಗಿದೆ. ಚಾರಣ ಸಾಗುವ ದಾರಿಯಲ್ಲಿ ಕಾಣಸಿಗುವ ಅಪರೂಪದ ಕೀಟಗಳು, ಸಸ್ಯ ಸಂಕುಲಗಳನ್ನು ಗಮನಿಸುತ್ತಾ ಅವುಗಳ ಸಂರಕ್ಷಣೆ ಮತ್ತು ಮಹತ್ವವನ್ನು ಅರಿಯಲು ಚಾರಣ ಸಹಾಯಕವಾಗಿದೆ ಎಂದರು.
ಗಸ್ತು ಅರಣ್ಯ ಪಾಲಕರಾದ ಉಮೇಶ್ ಮತ್ತು ಅಭಿಜಿತ್ ಚಾರಣ ಸಂದರ್ಭದಲ್ಲಿ ಚಾರಣಗರು ಅನುಸರಿಸಬೇಕಾದ ನಿಯಮಗಳ ಕುರಿತು ಮಾಹಿತಿ ನೀಡಿದರು.
ಕೆಸುವಿನ ಪಲ್ಯ, ಹಲಸು ಜೇನು, ಬರಗಾಫಿ ಸವಿದ ಚಾರಣಗರು. ಬಿದಿರುತಳದ ಕಾಡುದಾರಿಯಲ್ಲಿ ಚಾರಣ ಸಾಗಿದ್ದು ಕಾಡಿನ ನಡುವಿನ ಸುಂದರೇಶ್ ಅವರ ಮನೆಯಲ್ಲಿ ಮಲೆನಾಡಿನ ವಿಶೇಷ ಬರಗಾಫಿ ಸವಿದರು. ಹಲಸಿನ ಹಣ್ಣು, ಜೇನು ಸವಿದರು. ಮಧ್ಯಾಹ್ನ ಕೆಸುವಿನ ಪಲ್ಯ, ಪಾಯಸದ ಊಟ, ಸಂಜೆ ಪಕೋಡ, ಕಾಫಿ ಚಾರಣಗರು ನಾಲಿಗೆ ಚಪ್ಪರಿಸುವಂತೆ ಮಾಡಿತು.
ತೇಜಸ್ವಿ ಓದಿನ ಕಲರವ: ಮಳೆ ನಡಿಗೆಯ ನಂತರ ತೇಜಸ್ವಿ ಓದು ಕಾರ್ಯಕ್ರಮ ನಡೆಯಿತು. ಧಾರವಾಡದ ದೀಪಾ ಅಂದಾನಿಗೌಡ ಪಾಕಕ್ರಾಂತಿ, ಚಿತ್ರದುರ್ಗದ ದಿನೇಶ್ ಜುಗಾರಿಕ್ರಾಸ್, ತುಮಕೂರಿನ ಶಿಲ್ಪ ಅಲೆಮಾರಿಯ ಅಂಡಮಾನ್, ಶಿವಮೊಗ್ಗದ ರಾಧಾ ಹೆಜ್ಜೆ ಮೂಡದ ಹಾದಿ, ನಂದೀಶ್ ಬಂಕೇನಹಳ್ಳಿ ಕರ್ವಾಲೊ ಕೃತಿಯ ಸಾಲುಗಳನ್ನು ಓದಿದರು. ಹಾಸನಮ ಚಿಕ್ಕಮಗಳೂರು, ಬೆಂಗಳೂರು, ತುಮುಕೂರು, ಮಂಡ್ಯ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ರಾಮನಗರ, ಮೈಸೂರು, ಧಾರವಾಡದಿಂದ ಚಾರಣಗರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಾಂತ್ರಿಕ ಸಹಾಯಕ ನವದೀಪ್, ಪ್ರಜ್ವಲ್, ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿಗಳಾದ ಸತೀಶ್, ಸಂಗೀತಾ, ಕೀಟತಜ್ಞ ಡಾ.ಅವಿನಾಶ್, ಸ್ಥಳೀಯರಾದ ಸುಂದರೇಶ್ ಬಂಕೇನಹಳ್ಳಿ, ಸುಬ್ಬರಾಯ ಬಿದಿರುತಳ, ಸುಧಾಕರ, ಹರೀಶ್, ಸುನಿಲ್. ಶ್ರೀಕಾಂತ್, ಪೂರ್ಣೇಶ್, ಶಕುಂತಲ, ಮಮತ, ಗಂಗಾಧರಪ್ಪ ಮುಂತಾದವರು ಇದ್ದರು.