
ಕರ್ನಾಟಕ: ಫೆಂಗಲ್ ಚಂಡಮಾರುತ ತಂದ ಅವಾಂತರ ಒಂದೆರಡಲ್ಲ, ಒಂದೆಡೆ ಅಕಾಲಿಕ ಮಳೆ ಸೃಷ್ಟಿಸಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಯಾಗಿದ್ದಷ್ಟೇ ಅಲ್ಲದೆ ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿದೆ. ರೈತರು ಮಳೆಯಿಂದ ಬೆಳೆದ ಬೆಳೆಯನ್ನು ಕಳೆದುಕೊಂಡು ಒಂದಷ್ಟು ನೀರುಪಾಲಾದರೆ ಇನ್ನೊಂದಷ್ಟು ಹಾಳಾಗಿ ಹೋಗಿದೆ. ಈ ನಡುವೆ ಇದು ಜನಸಾಮಾನ್ಯರ ಜೀವನಕ್ಕೂ ಕುತ್ತು ತಂದಿದೆ. ಹೌದು ಮಳೆಯಿಂದ ರೈತರು ಬೆಳೆದ ಬೆಳೆ ಹಾಳಾಗಿದೆ, ಜೊತೆಗೆ ಹೊರರಾಜ್ಯದಿಂದ ಮಾರುಕಟ್ಟೆಗೆ ಬರುತ್ತಿದ್ದ ತರಕಾರಿಗಳೂ ಪೂರೈಕೆಯಾಗುತ್ತಿಲ್ಲ. ಇದರಿಂದ ತರಕಾರಿ ಬೆಲೆ ಗಗನಕ್ಕೇರುತ್ತಿದೆ. ಈ ಮೊದಲು ಕೂಡ ಅಕಾಲಿಕ ಮಳೆಯಿಂದ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿತ್ತು, ಆನಂತರದಲ್ಲಿ ಮಳೆ ಕಡಿಮೆಯಾದ ನಂತರ ತರಕಾರಿ ಬೆಲೆ ಇಳಿಮುಖವಾಗಿತ್ತು ಆದರೆ ಇದೀಗ ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಫೆಂಗಲ್ ಚಂಡಮಾರುತದಿಂದ ಮತ್ತೆ ಮಳೆ ಬಂದು ಅವಾಂತರಗಳು ಸೃಷ್ಟಿಯಾಗಿದೆ. ಕೆ.ಜಿಗೆ 30-40 ರೂ ಇದ್ದ ಟೊಮೆಟೋ ಈಗ 70ರೂವರೆಗೂ ಮಾರಾಟವಾಗುತ್ತಿದೆ. ಕ್ಯಾರೆಟ್ 80ರೂ, ಈರುಳ್ಳಿ 70-80, ಬೆಳ್ಳುಳ್ಳಿ 400-500 ರೂ ಗೆ ಮಾರಾಟವಾಗುತ್ತಿದೆ. ಇದು ಹೀಗೆ ಮುಂದುವರೆದರೆ ಜನಸಾಮಾನ್ಯರ ಪಾಡೇನು ಎಂಬಂತಾಗಿದೆ.