
Sringeri
(Sringeri) ಶೃಂಗೇರಿ: ಹನ್ನೆರಡು ಶತಮಾನಗಳ ಹಿಂದೆ ಕೇರಳದ ಕಾಲಟೀ ಕ್ಷೇತ್ರದಲ್ಲಿ ಅವತರಿಸಿದ ಶ್ರೀಮದಾದಿಶಂಕರ ಭಗವತ್ಪಾದಾಚಾರ್ಯರು ಭಾರತದ ಉದ್ದಗಲಕ್ಕೂ ಸಂಚಾರಮಾಡಿ ಸನಾತನ ವೈದಿಕ ಧರ್ಮವನ್ನೂ, ಉಪನಿಷತ್ಪ್ರತಿಪಾದ್ಯವಾದ ಅದ್ವೈತಸಿದ್ಧಾಂತವನ್ನೂ ಪುನರುಜ್ಜೀವನಗೊಳಿಸಿ ಎಲ್ಲ ಕಡೆಗಳಲ್ಲಿಯೂ ಪ್ರಚಾರ ಮಾಡಿ ಅದರ ನಿರಂತರ ಪ್ರಚಾರಕ್ಕಾಗಿ ಭಾರತದ ನಾಲ್ಕು ದಿಕ್ಕುಗಳಲ್ಲಿ ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿದರೆಂಬ ವಿಷಯ ಸರ್ವವಿದಿತವಾಗಿದೆ. ಚತುರಾಮ್ನಾಯ ಪೀಠಗಳಲ್ಲಿ ಪ್ರಮುಖವಾದ ದಕ್ಷಿಣಾಮ್ನಾಯ ಶಾರದಾಪೀಠವು ತುಂಗಭದ್ರಾತೀರದಲ್ಲಿರುವ ಶೃಂಗೇರಿ ಕ್ಷೇತ್ರದಲ್ಲಿ ವಿರಾಜಮಾನವಾಗಿದೆ. ಶ್ರೀ ಶಂಕರಾಚಾರ್ಯರ ಪ್ರಧಾನಶಿಷ್ಯರಾದ ಶ್ರೀಸುರೇಶ್ವರಾಚಾರ್ಯರಿಂದ ಆರಂಭಿಸಿ ಇಂದಿನವರೆಗೂ ಈ ಪೀಠವೂ ಅವಿಚ್ಛಿನ್ನವಾದ ಗುರುಪರಂಪರೆಯಿಂದ ಕಂಗೊಳಿಸುತ್ತಿದೆ. ಸಕಲವಿದ್ಯಾಧಿದೇವತೆಯಾದ ಶ್ರೀಶಾರದಾಪರಮೇಶ್ವರಿಯು ಈ ಪೀಠದ ಆರಾಧ್ಯದೇವತೆಯಾಗಿ ಭಕ್ತಜನಸಂಕಲ್ಪವೃಕ್ಷವಾಗಿ ಶೋಭಿಸುತ್ತಿದ್ದಾಳೆ. ಈ ಪೀಠಗಳಲ್ಲಿ ನಡೆಯುವ ಉತ್ಸವಗಳಲ್ಲಿ ಶರನ್ನವರಾತ್ರಿ ಮಹೋತ್ಸವವು ಅತ್ಯಂತ ಪ್ರಮುಖವು ಆಕರ್ಷವು ಆಗಿರುತ್ತದೆ. ಪ್ರಕೃತ ಕ್ರೋಧಿನಾಮ ಸಂವತ್ಸರದ ಶರನ್ನವರಾತ್ರಿ ಮಹೋತ್ಸವವನ್ನು ಆಶ್ವಯುಜ ಶುಕ್ಲ ಪ್ರತಿಪತ್ತಿನಿಂದ ಏಕಾದಶಿವರೆಗೆ (ದಿನಾಂಕ 02.10.2024 ರಿಂದ 13.10.2024 ರವರೆಗೆ) ಶೃಂಗೇರಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರುತ್ತದೆ.
ಅಲಂಕಾರಗಳ ಮಹತ್ವ
ಶ್ರೀ ದೇವಿ ಮಾಹಾತ್ಮ್ಯಮ್ನಲ್ಲಿ ದೇವಿಯು ಉಲ್ಲೇಖಿಸಿದ ಉಲ್ಲೇಖವು “ಏಕೈವಾಹಂ ಜಗತ್ಯತ್ರ ದ್ವಿತೀಯ ಕಾ ಮಮಾಪರಾ” (ಜಗತ್ತಿನಲ್ಲಿ ನಾನೊಬ್ಬನೇ ಶಾಶ್ವತ ಶಕ್ತಿ ಮತ್ತು ಬೇರೆ ಯಾವುದೂ ಎರಡನೆಯದಲ್ಲ) ಎಂದು ಹೇಳುತ್ತದೆ. ಆದ್ದರಿಂದ ಈ ಎಲ್ಲಾ ವಿಭಿನ್ನ ಅಲಂಕಾರಗಳು ಮತ್ತು ಅವತಾರಗಳು ಜಗನ್ಮಾತೆಯದ್ದು. ಆ ಜಗನ್ಮಾತೆಯು ಸರಸ್ವತಿಯ ರೂಪವನ್ನು ತಳೆದು ವಿದ್ಯೆ ಮತ್ತು ಜ್ಞಾನವನ್ನು ದಯಪಾಲಿಸುತ್ತಾಳೆ, ಮಹಾಲಕ್ಷ್ಮಿಯ ರೂಪವನ್ನು ತಳೆದು ಐಶ್ವರ್ಯ, ಆಹಾರ ಇತ್ಯಾದಿಗಳನ್ನು ನೀಡುತ್ತಾಳೆ ಮತ್ತು ದುಷ್ಟಬುದ್ಧಿಯುಳ್ಳವರ ನಾಶನ ಕಾಲದಲ್ಲಿ ಮಹಾಕಾಳಿ (ಚಾಮುಂಡಿ) ರೂಪವನ್ನು ತಾಳುತ್ತಾಳೆ. ಅವಳು ತನ್ನ ಭಕ್ತರನ್ನು ವಿವಿಧ ಹೆಸರುಗಳು ಮತ್ತು ರೂಪಗಳ ಮೂಲಕ ರಕ್ಷಿಸುತ್ತಾಳೆ. ಜಗದಂಬೆಯ ರೂಪಗಳು ಮತ್ತು ನಾಮಗಳು ಅಸಂಖ್ಯವಾಗಿದ್ದರೂ ಚೈತನ್ಯ ಒಂದೇ. ದೇವಿಗೆ ವಿವಿಧ ಅಲಂಕಾರಗಳನ್ನು ಮಾಡುವ ಪ್ರಕ್ರಿಯೆಯಲ್ಲಿ ಅಂತಹ ದೊಡ್ಡ ತಾತ್ವಿಕ ಸತ್ಯವಿದೆ. ಅದರಂತೆಯೇ ಶೃಂಗೇರಿ ಶರನ್ನವರಾತ್ರಿ ಮಹೋತ್ಸವದಲ್ಲಿ ವಿಭಿನ್ನ ಅಲಂಕಾರಗಳು ಮತ್ತು ಅವತಾರಗಳೊಂದಿಗೆ ಜಗನ್ಮಾತೆಯಾದ ಶ್ರೀಶಾರದಾಪರಮೇಶ್ವರಿಯು ವಿಜೃಂಭಣೆಯಿಂದ ಕಂಗೊಳಿಸುತ್ತಾಳೆ.
ಶರನ್ನವರಾತ್ರಿಯ 02.10.2024ರ ಭಾದ್ರಪದ ಕೃಷ್ಣ ಅಮವಾಸ್ಯೆಯೆಂದು ತಾಯಿ ಶ್ರೀ ಶಾರದಾದೇವಿಗೆ ಮಹಾಭಿಷೇಕವನ್ನು ನೆರವೇರಿಸಿ ನಂತರ ಜಗತ್ಪ್ರಸೂತಿಕಾಅಲಂಕಾರದೊಂದಿಗೆ ಭಕ್ತರಿಗೆ ದರ್ಶನ ನೀಡುತ್ತಾಳೆ. ಶರನ್ನವರಾತ್ರಿಯ 03.10.2024ರ ಮೊದಲನೆಯ ದಿನದ ಅಶ್ವಯುಜ ಶುಕ್ಲ ಪ್ರತಿಪತ್ರಂದು ಜಗನ್ಮಾತೆ ಶ್ರೀ ಶಾರದಾ ಪ್ರತಿಷ್ಠೆಯನ್ನು ಮಾಡಿ, ಹಂಸವಾಹನಾಲಂಕಾರ(ಬ್ರಾಹ್ಮಿ)ದೊಂದಿಗೆ ತಾಯಿ ಶೋಭಿಸುತ್ತಾಳೆ. ಶರನ್ನವರಾತ್ರಿಯ 04.10.2024ರ ಎರಡನೆಯ ದಿನ ಅಶ್ವಯುಜ ಶುಕ್ಲ ದ್ವಿತೀಯಾದಂದು ತಾಯಿ ಶ್ರೀ ಶಾರದಾದೇವಿಯು ಪುನಃ ಹಂಸವಾಹನಾಲಂಕಾರ(ಬ್ರಾಹ್ಮಿ)ದೊಂದಿಗೆ ಕಂಗೊಳಿಸುತ್ತಾಳೆ. ಶರನ್ನವರಾತ್ರಿಯ 05.10.2024ರ ಮೂರನೆಯ ದಿನ ಅಶ್ವಯುಜ ಶುಕ್ಲ ತೃತೀಯಾದಂದು ಶ್ರೀ ಶಾರದಾದೇವಿಯು ವೃಷಭವಾಹನಾಲಂಕಾರ(ಮಾಹೇಶ್ವರೀ)ದೊಂದಿಗೆ ಭಕ್ತರಿಗೆ ಅಭಯ ಹಸ್ತ ನೀಡುತ್ತಾಳೆ. ಶರನ್ನವರಾತ್ರಿಯ 06.10.2024 ರ ನಾಲ್ಕನೆಯ ದಿನ ಅಶ್ವಯುಜ ಶುಕ್ಲ ಚತುರ್ಥಿಯಂದು ಜಗನ್ಮಾತೆ ಶ್ರೀ ಶಾರದಾದೇವಿಯು ಮಯೂರವಾಹನಾಲಂಕಾರ(ಕೌಮಾರೀ)ದೊಂದಿಗೆ ಮೇಳೈಸುತ್ತಾಳೆ. ಶರನ್ನವರಾತ್ರಿಯ 07.10.2024ರ ಐದನೆಯ ದಿನ ಅಶ್ವಯುಜ ಶುಕ್ಲ ಪಂಚಮಿಯಂದು ಶ್ರಿಶಾರದಾದೇವಿಯು ಗರುಡವಾಹನಾಲಂಕಾರ(ವೈಷ್ಣವೀ)ದೊಂದಿಗೆ ಅಲಂಕೃತಗೊಳ್ಳುತ್ತಾಳೆ ನಂತರ ಶತಚಂಡೀಮಹಾಯಾಗದ ಸಂಕಲ್ಪ, ಪುರಶ್ಚರಣಾರಂಭ ನೇರವೇರಲಿದೆ. ಶರನ್ನವರಾತ್ರಿಯ 08.10.2024ರ ಆರನೆಯ ದಿನ ಅಶ್ವಯುಜ ಶುಕ್ಲ ಪಂಚಮಿಯಂದು ಶ್ರೀ ಶಾರದಾದೇವಿಯು ಮೋಹಿನೀ ಅಲಂಕಾರದೊಂದಿಗೆ ವಿಜೃಂಭಣೆಯಿಂದ ಪೂಜಿಸಲ್ಪಡುತ್ತಾಳೆ. ಶರನ್ನವರಾತ್ರಿಯ 09.10.2024ರ ಏಳನೆಯ ದಿನ ಅಶ್ವಯುಜ ಶುಕ್ಲ ಷಷ್ಠಿಯಂದು ಮೂಲ ನಕ್ಷತ್ರ ಸರಸ್ವತ್ಯಾವಾಹನೆ, ವೀಣಾಶಾರದಾಲಂಕಾರದೊಂದಿಗೆ ಕಂಗೊಳಿಸುತ್ತಾಳೆ. ಶರನ್ನವರಾತ್ರಿಯ10.10.2024ರ ಎಂಟನೆಯ ದಿನ ಅಶ್ವಯುಜ ಶುಕ್ಲ ಸಪ್ತಮಿಯಂದು ಶಾರದಾದೇವಿಗೆ ರಾಜರಾಜೇಶ್ವರೀ ಅಲಂಕಾರವನ್ನು ಮಾಡಿ ಪೂಜೆಯನ್ನು ಸಲ್ಲಿಸಲಾಗುತ್ತದೆ. ಶರನ್ನವರಾತ್ರಿಯ 11.10.2024 ರ ಒಂಭತ್ತನೆಯ ದಿನದ ಅಶ್ವಯುಜ ಶುಕ್ಲ ಅಷ್ಟಮಿ ಉಪರಿ ಮಹಾನವಮಿಯಂದು ಜಗನ್ಮಾತೆ ಶ್ರೀ ಶಾರದಾದೇವಿಗೆ ಸಿಂಹವಾಹನಾಲಂಕಾರ(ಚಾಮುಂಡ)ಮಾಡಿ ಶತಚಂಡೀಯಾಗದ ಪೂರ್ಣಾಹುತಿ ನೆರವೇರಿಸಿ, ಗಜಾಶ್ವಪೂಜೆಯನ್ನು ಮಾಡಲಾಗುತ್ತದೆ. ಇಲ್ಲಿಗೆ ದುಷ್ಟರೊಂದಿಗೆ ದೇವಿಯು ನವ ರಾತ್ರಿಗಳ ಹೋರಾಟ ಮುಗಿಸಿ ಹತ್ತನೆ ದಿನದಂದು ವಿಜಯವನ್ನು ಸಾಧಿಸಿಸುತ್ತಾಳೆ. ಅಂದಿನ ದಿನವನ್ನು ವಿಜಯದಶಮಿಯಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶರನ್ನವರಾತ್ರಿಯ 12.10.2024ರ ಹತ್ತನೆಯ ದಿನ ಅಶ್ವಯುಜ ಶುಕ್ಲ ದಶಮಿಯಂದು ವಿಜಯದಶಮಿಯ ಪ್ರಯುಕ್ತ ತಾಯಿ ಶಾರದಾಮಾತೆಗೆ ವೈಭೋಗದಿಂದ ಗಜಲಕ್ಷ್ಮೀ ಅಲಂಕಾರ ಮಾಡಿ ಪೂಜಿಸುತ್ತಾರೆ. ಜೊತೆಗೆ ಬೆಳಿಗ್ಗೆ-ಲಕ್ಷ್ಮೀನಾರಾಯಣಹೃದಯ ಹೋಮ, ರಾಮಪಟ್ಟಾಭಿಷೇಕ ಸರ್ಗ ಪಾರಾಯಣಿ, ಸಂಜೆ-ವಿಜಯೋತ್ಸವ, ಶಮೀಪೂಜೆ ಎಲ್ಲವೂ ತಾಯಿ ಶಾರದೆಯ ಆರ್ಶೀವಾದದೊಂದಿಗೆ ನೆರವೇರುತ್ತದೆ.
ನವರಾತ್ರಿಗಳು ಮುಗಿದು ವಿಜಯದಶಮಿ ಸಮಾಪ್ತಿಯಾದ ನಂತರ ಮಾರನೆ ದಿನವಾದ 13.10.2024ರ ಅಶ್ವಯುಜ ಶುಕ್ಲ ಏಕಾದಶಿಯಂದು ಜಗನ್ಮಾತೆ ಶ್ರೀ ಶಾರದಾದೇವಿಗೆ ವೈಭೋಗ, ವಿಜೃಂಭಣೆಯಿಂದ ಗಜಲಕ್ಷ್ಮೀ ಅಲಂಕಾರವನ್ನು ಮಾಡಿ, ಶ್ರೀ ಶಾರದಾಂಬಾ ಮಹಾರಥೋತ್ಸವವನ್ನು ಶ್ರೀಜಗದ್ಗುರು ಮಹಾಸ್ವಾಮಿಗಳವರ ಅಡ್ಡಪಲ್ಲಕ್ಕಿ ಉತ್ಸವದೊಂದಿಗೆ ಮೆರವಣಿಗೆ ಮೂಲಕ ಶೃಂಗೇರಿಯ ರಾಜಬೀದಿಯಲ್ಲಿ ಮನೋಹರವಾಗಿ ನೆರವೇರಿಸಿ ಶೃಂಗೇರಿಯ ಶರನ್ನವರಾತ್ರಿಯನ್ನು ಸಮಾಪ್ತಿ ಮಾಡಲಾಗುತ್ತದೆ.