
ಚಾಮರಾಜನಗರ: ಅಯೋಧ್ಯೆಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಬೆಳೆಸಿ ಶ್ರೀರಾಮನ ದರ್ಶನ ಪಡೆದು ಮರಳಿದ ಯುವಕ ಕರ್ಣ ಅವರಿಗೆ ಶ್ರೀ ಚಾಮರಾಜೇಶ್ವರ ಸ್ನೇಹ ಬಳಗದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಕೃತಿ ಚಿಂತಕ ಹಾಗೂ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್. ಋಗ್ವೇದಿ ಮಾತನಾಡಿ, ಭಾರತದಲ್ಲಿರುವ ಧಾರ್ಮಿಕ ಕೇಂದ್ರಗಳು ಹಾಗೂ ಇತಿಹಾಸ ಪ್ರಸಿದ್ಧ ಸ್ಥಳಗಳಿಗೆ ಯುವಕರು ಮತ್ತು ವಿದ್ಯಾರ್ಥಿಗಳು ಭೇಟಿ ನೀಡಿ ಅಧ್ಯಯನ ಮಾಡಬೇಕು ಎಂದು ಹೇಳಿದರು. ಬ್ಯಾಡ ಮೂಡ್ಲು ಗ್ರಾಮದ ಯುವಕ ಕರ್ಣ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಸುಮಾರು 5 ಸಾವಿರ ಕಿಲೋಮೀಟರ್ ಪ್ರಯಾಣಿಸಿ ಭಾರತದ ಶ್ರದ್ಧಾ ಕೇಂದ್ರವಾದ ಅಯೋಧ್ಯೆಗೆ ತೆರಳಿ ಭಕ್ತಿಯಿಂದ ಶ್ರೀರಾಮನ ದರ್ಶನ ಪಡೆದು ಮರಳಿರುವುದು ಹೆಮ್ಮೆಯ ಸಂಗತಿ ಎಂದರು. ಧರ್ಮ, ಭಕ್ತಿ ಹಾಗೂ ಪ್ರವಾಸಗಳು ಮಾನವನ ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿಯಾಗುತ್ತವೆ. ಯುವಕರು ವ್ಯಸನಗಳಿಂದ ದೂರವಿದ್ದು, ಪ್ರತಿ ಗ್ರಾಮದಲ್ಲೂ ಯುವಕರ ಪಡೆಗಳನ್ನು ರಚಿಸಿಕೊಂಡು ಧರ್ಮ, ಸಂಸ್ಕೃತಿ, ಪರಿಸರ ಮತ್ತು ಪರಂಪರೆಯ ಸಂರಕ್ಷಣೆಗೆ ಮುಂದಾಗಬೇಕು. ಇತಿಹಾಸದ ಅಧ್ಯಯನ, ದೇವಾಲಯಗಳ ಸಂರಕ್ಷಣೆ ಹಾಗೂ ಪ್ರಾಚೀನ ಗುಡಿ ಗೋಪುರಗಳ ನಿರ್ವಹಣೆಗೆ ವಿಶೇಷ ಜಾಗೃತಿ ಮೂಡಿಸಬೇಕು. ದೇಶದಲ್ಲಿ ಉತ್ತಮ ರಸ್ತೆಗಳು ಹಾಗೂ ಪ್ರಯಾಣದ ವ್ಯವಸ್ಥೆಗಳು ರೂಪುಗೊಂಡಿದ್ದು, ಯುವಕರು ಧೈರ್ಯ ಮತ್ತು ಭಕ್ತಿಯಿಂದ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಸಮಾಜ ಸೇವಕರಾದ ವೆಂಕಟ ನಾಗಪ್ಪ ಶೆಟ್ಟಿ, ಮಹೇಶ್ ಹಾಗೂ ಸುರೇಶ್ ಅವರು ಪ್ರವಾಸಿಗ ಕರ್ಣ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಚಳುವಳಿಯ ಹಿರಿಯ ಹೋರಾಟಗಾರರಾದ ಶಾ ಮುರಳಿ, ರಾಜಗೋಪಾಲ್, ಆನಂದ್, ಭಗೀರಥ, ಕಾಂತರಾಜು, ಸುರೇಶ್ ನಾಗ್ ಹರದನಹಳ್ಳಿ, ಶ್ರೀ ಚಾಮರಾಜೇಶ್ವರ ಸ್ನೇಹ ಬಳಗದ ಬಂಡಿಗಾರ್ ಮಹೇಶ್, ಸುರೇಶ್, ರಂಗಸ್ವಾಮಿ, ಸ್ವಾಮಿ, ಪ್ರಜ್ವಲ್, ಚೆನ್ನೀಪುರದ ಮೋಳೆ ಜಯಕುಮಾರ್, ನಾರಾಯಣ, ನಾಗೇಶ್, ವಿಶ್ವಾಸ್, ಕುಮಾರ್ ಕನ್ನಡ, ಶಿವಲಿಂಗಮೂರ್ತಿ, ನಂಜಪ್ಪ ಶೆಟ್ಟಿ, ಆರಾಧ್ಯ ಹಾಗೂ ಜಗದೀಶನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




