
ಚಿಕ್ಕಮಗಳೂರು/ಚಾಮರಾಜನಗರ : ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಜನವಸತಿ ಪ್ರದೇಶಗಳು ಹಾಗೂ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿರುವುದರಿಂದ 50ಕ್ಕೂ ಅಧಿಕ ಗ್ರಾಮಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಹಾಸನದಿಂದ ಕಾಡಾನೆಗಳನ್ನು ಚಿಕ್ಕಮಗಳೂರು ಭಾಗಕ್ಕೆ ಸ್ಥಳಾಂತರಿಸುವುದನ್ನು ವಿರೋಧಿಸಿ ತೀವ್ರ ಪ್ರತಿಭಟನೆ ಹಾಗೂ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆಯೇ ಕಾಫಿನಾಡಿನಲ್ಲಿ ಆನೆಗಳ ಸಂಚಾರ ಮತ್ತಷ್ಟು ಭೀತಿ ಮೂಡಿಸಿದೆ. ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ರಾವೂರು ಗ್ರಾಮದ ಬಳಿ ಭದ್ರಾ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಜನವಸತಿ ಪ್ರದೇಶದ ಸಮೀಪವೇ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು, ಆನೆಗಳನ್ನು ಸೆರೆಹಿಡಿದು ಸ್ಥಳಾಂತರಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಬೀಟಮ್ಮ, ಭುವನೇಶ್ವರಿ ಹಾಗೂ ಓಲ್ಡ್ ಬೆಲ್ಟ್ ಕಾಡಾನೆಗಳ ಗುಂಪುಗಳು ನಾಲ್ಕು ತಂಡಗಳಾಗಿ ಚದುರಿದ್ದು, ಮಾಕೋನಹಳ್ಳಿ ಬಳಿ ಮೊದಲ ಗುಂಪು, ಕಾರ್ ಬೈಲು ಗ್ರಾಮದ ಬಳಿ ಎರಡನೇ ಗುಂಪು, ಕಸ್ಕೆಬೈಲು ಗ್ರಾಮದ ಬಳಿ ಮೂರನೇ ಗುಂಪು ಹಾಗೂ ಕಲ್ಲುಗುಡ್ಡ ಗ್ರಾಮದ ಬಳಿ ನಾಲ್ಕನೇ ಗುಂಪು ಬೀಡುಬಿಟ್ಟಿವೆ. ಈ ನಾಲ್ಕು ಗುಂಪುಗಳಲ್ಲಿ ಒಟ್ಟು 39 ಕಾಡಾನೆಗಳಿವೆ ಎನ್ನಲಾಗಿದ್ದು, ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಆನೆಗಳಿಂದ 50ಕ್ಕೂ ಅಧಿಕ ಗ್ರಾಮಗಳ ಜನರು ಆತಂಕದಲ್ಲಿದ್ದಾರೆ. ಕಳೆದ ನಾಲ್ಕು ದಿನಗಳಿಂದ ವಿವಿಧ ಪ್ರದೇಶಗಳಲ್ಲಿ ಗಜಪಡೆ ಸಂಚರಿಸುತ್ತಿದ್ದು, ಕಾಫಿ ಕೊಯ್ಲಿನ ಸಮಯದಲ್ಲೇ ಆನೆಗಳ ಹಾವಳಿ ಹೆಚ್ಚಾಗಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಾಫಿ ತೋಟಗಳಿಗೆ ತೆರಳದಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.
ಇತ್ತ ಚಾಮರಾಜನಗರ ಜಿಲ್ಲೆಯಲ್ಲಿಯೂ ಮಾನವ-ಕಾಡುಪ್ರಾಣಿ ಸಂಘರ್ಷ ತೀವ್ರಗೊಂಡಿದ್ದು, ಗುಂಡ್ಲುಪೇಟೆ ತಾಲೂಕಿನ ಬರ್ಗಿ ಮುಕ್ತಿ ಕಾಲೋನಿಯ ಸಿದ್ದ ಶೆಟ್ಟಿ ಎಂಬುವವರ ಜಮೀನಿಗೆ ನುಗ್ಗಿದ ಒಂಟಿ ಸಲಗ ಬೆಳೆಯನ್ನು ಸಂಪೂರ್ಣವಾಗಿ ನಾಶಪಡಿಸಿದೆ. ಕಾಡಾನೆಯನ್ನು ಓಡಿಸಲು ರೈತರು ಹರಸಾಹಸಪಟ್ಟಿದ್ದು, ಸರಿಯಾದ ಕಂದಕ ವ್ಯವಸ್ಥೆ ಹಾಗೂ ಸೋಲಾರ್ ಬೇಲಿ ಇಲ್ಲದಿರುವುದೇ ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪ್ರತಿನಿತ್ಯ ಜೀವದ ಹಂಗು ತೊರೆದು ಬೆಳೆಗಳನ್ನು ರಕ್ಷಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಾಡಾನೆ ದಾಳಿಯಿಂದ ಜೀವಹಾನಿಯಾದರೆ ಬಂಡೀಪುರ ಅರಣ್ಯ ಇಲಾಖೆಯ ಸಿಬ್ಬಂದಿಯೇ ನೇರ ಹೊಣೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರು ಹಾಗೂ ರೈತರ ಒತ್ತಾಯವಾಗಿದೆ.




